ಮಂಡ್ಯ: ಕರುಳಿಗೆ ಸಂಬಂಧಿಸಿದಂತೆ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ವೈದ್ಯರನ್ನು ಶನಿವಾರ ಮಹಿಳೆಯ ಕುಟುಂಬದವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಮದ್ದೂರು ತಾಲೂಕಿನ ಎಸ್.ಐ. ಹಾಗಲಹಳ್ಳಿ ಗ್ರಾಮದ ಭುವನಾ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಏಳು ತಿಂಗಳ ಗರ್ಭಿಣಿ ಭುವನಾ ಅವರಿಗೆ ಕರುಳಿನ ಮೇಲೆ ಕರುಳು ಇತ್ತು. ಜತೆಗೆ ಗಂಟು ಬೆಳೆದುಕೊಂಡಿತ್ತು. ಅದನ್ನು ಬೇರ್ಪಡಿಸಿ ಶಸ್ತ್ರಚಿಕಿತ್ಸೆ ಮಾಡಿ ಎರಡು ಜೀವಗಳನ್ನು ಉಳಿಸಿದ್ದರು. ಸದ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಹಲವು ಆಸ್ಪತ್ರೆಯಲ್ಲಿ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತೇಜಸ್ ಅವರು ತಮ್ಮ ಪತ್ನಿ ಭುವನಾ ಅವರನ್ನು ಮಿಮ್ಸ್‌ಗೆ ಕರೆದುಕೊಂಡು ಬಂದಿದ್ದರು. ಅಂತೆಯೇ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಮನೋಹರ್ ಮತ್ತು ನರರೋಗ ತಜ್ಞ ಡಾ.ಲಿಂಗರಾಜು ತಂಡ ವಿಶೇಷ ಪ್ರಕರಣವೆಂದು ಗಮನಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಡಾ.ಮನೋಹರ್, ಡಾ.ಲಿಂಗರಾಜು, ಅರಿವಳಿಕೆ ತಜ್ಞ ಡಾ.ಶಿವಕುಮಾರ್, ಸರ್ಜನ್ ಡಾ.ಅನಿತಾರಾಣಿ, ಡಾ.ಸಂಧ್ಯಾ, ಡಾ.ನಂದಿನಿ, ಡಾ.ಅಭಿ ಅವರನ್ನು ಸನ್ಮಾನಿಸಲಾಯಿತು. ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಪ್ರಾಂಶುಪಾಲ ಡಾ.ತಮ್ಮಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಸ್ಥಾನಿಯ ವೈದ್ಯಾಧಿಕಾರಿ ಡಾ.ಎನ್.ವೆಂಕಟೇಶ್, ಮುಖ್ಯ ಆಡಳಿತಾಧಿಕಾರಿ ಜಾನ್ಸನ್, ಪಿಆರ್‌ಒ ಉಮೇಶ್, ಒಕ್ಕಲಿಗರ ಸಂಘದ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ತಿಪ್ಪೂರು ಮನು, ವಕೀಲ ಆನಂದ್, ನಂದೀಶ್, ತೇಜಸ್ ಇತರರಿದ್ದರು.
ಮಿಮ್ಸ್ ಇತಿಹಾಸದಲ್ಲಿ ಪ್ರಥಮ: ಮಿಮ್ಸ್ ಇತಿಹಾಸದಲ್ಲಿಯೇ ಇದು ಪ್ರಥಮ ಪ್ರಕರಣವಾಗಿದೆ. ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಅಪರೂಪ. ಪ್ರತಿ 70 ಸಾವಿರದಿಂದ 1 ಲಕ್ಷ ಜನರಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ಗರ್ಭಿಣಿಗೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗು ಇಬ್ಬರ ಜೀವವನ್ನು ಉಳಿಸಿಕೊಳ್ಳಬೇಕಾದ ಸವಾಲು ಮಿಮ್ಸ್ ವೈದ್ಯರಿಗೆ ಎದುರಾಯಿತು. ಜ.7ರಂದು ಮಹಿಳೆಯನ್ನು ದಾಖಲಿಸಿಕೊಂಡು ಎರಡು ದಿನ ಸ್ಕಾೃನಿಂಗ್ ಸೇರಿದಂತೆ ಹಲವು ಪರೀಕ್ಷೆ ಮಾಡಲಾಯಿತು. ಜ.10ರಂದು ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಈ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ ಕೇಳಲಾಗಿತ್ತು. ಜತೆಗೆ ತಾಯಿ ಮತ್ತು ಮಗುವಿನ ಜೀವ ಉಳಿದುಕೊಳ್ಳುವ ಭರವಸೆ ನೀಡಿರಲಿಲ್ಲ. ಆದರೆ ಮಿಮ್ಸ್‌ನಲ್ಲಿ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಹೆರಿಗೆವರೆಗೂ ಮಿಮ್ಸ್ ವೈದ್ಯರೇ ಗರ್ಭಿಣಿ ಹಾಗೂ ಮಗುವಿನ ಮೇಲೆ ನಿಗಾ ವಹಿಸಲಿದ್ದಾರೆ. ಇಬ್ಬರ ಜೀವ ಉಳಿಸಿದ ವೈದ್ಯರ ತಂಡದ ಸೇವೆಯನ್ನು ಕುಟುಂಬದವರು ಹಾಗೂ ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.