ಗೌರಿಬಿದನೂರು: ನಗರ ಹೊರವಲಯದ ಮಾದನಹಳ್ಳಿ ಬಳಿ ಇರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು.
ವೈದ್ಯರು ಹಾಗೂ ಶುಶೂಷ್ರಕಿಯರ ಹಾಜರಾತಿ ಪುಸ್ತಕದಲ್ಲಿ ಮೂರು ದಿನಗಳಿಂದ ವೈದ್ಯ ಡಾ.ಗೋವಿಂದರಾಜು ಹಾಗೂ ದಾದಿಯರ ಹಾಜರಾತಿ ಇಲ್ಲದ್ದನ್ನು ಕಂಡು ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಹಾಗೂ ಹಿರಿಯ ಶುಶ್ರೂಷಕಿ ಪೂಮಣಿ ಅವರನ್ನು ಪ್ರಶ್ನಿಸಿದರು. ಅವರು ರಾತ್ರಿ ಪಾಳಿ ನಿರ್ವಹಿಸಿದ್ದಾರೆ ಎಂಬ ಉತ್ತರಕ್ಕೆ ಸಿಡಿಮಿಡಿಗೊಂಡ ನ್ಯಾಯಾಧೀಶರು, ರಾತ್ರಿ ಪಾಳಿ ಇದ್ದರೆ ಸಹಿ ಹಾಕಲು ಕಷ್ಟವೇನು, ವಹಿ ಇರುವುದು ಏತಕ್ಕೆ, ನಿಮ್ಮ ಕಾರ್ಯ ಹೇಗಿದೆ ನೋಡಿ, ಕನಿಷ್ಠ ಶುಶ್ರೂಷಕಿಯರೂ ಕರ್ತವ್ಯಕ್ಕೆ ಹಾಜರಾಗಿರುವುದರ ಬಗ್ಗೆ ನೀವು ಗಮನಹರಿಸಬೇಕಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಪ್ರವೇಶ ದ್ವಾರದಲ್ಲಿದ್ದ ಚೀಟಿ ಕೌಂಟರ್‌ಗೆ ಭೇಟಿ ನೀಡಿ ದಾಖಲೆ ಪುಸ್ತಕಗಳನ್ನು ಪರಿಶೀಲಿಸಿದರು. ಗರ್ಭಿಣಿ ಮಹಿಳೆಯರ ಸಂಬಂಧಿಕರು ರಕ್ತ ಹಾಗೂ ಇತರ ಪರೀಕ್ಷೆಗಳಿಗೆ ಹಣ ತೆಗೆದುಕೊಳ್ಳುತ್ತಿರುವುದಾಗಿ ನ್ಯಾಯಾಧೀಶರ ಗಮನಕ್ಕೆ ತಂದರು. ಹಣ ಪಡೆದಿರುವ ರಶೀದಿ ಪುಸ್ತಕ ಕಂಡು, ನೀವು ಯಾವ ಆಧಾರದ ಮೇಲೆ ಹಣ ಪಡೆಯುತ್ತಿದ್ದೀರಿ, ಅದಕ್ಕೆ ಯಾರ ಅನುಮತಿ ಇದೆ, ಇದಕ್ಕೆ ಸುತ್ತೋಲೆ ಕೊಡಿ ಎಂದು ರಶೀದಿ ಕೊಡುವ ಸಿಬ್ಬಂದಿ ಹಾಗೂ ಆಡಳಿತ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು. ಸಮರ್ಪಕ ಉತ್ತರ ನೀಡದ್ದನ್ನು ಕಂಡು ನಿಮ್ಮ ಮೇಲೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.
ಬಾಣಂತಿಯರ ವಾರ್ಡಿಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಶೌಚಾಲಯಕ್ಕೆ ಭೇಟಿ ನೀಡಿದಾಗ ಅನೈರ್ಮಲ್ಯ ಕಂಡು, ಇದು ಕೂಡಲೇ ಸರಿಹೋಗಬೇಕು ಎಂದು ಸೂಚಿಸಿದರು. ಆಸ್ಪತ್ರೆಯ ಸ್ಕಾನಿಂಗ್ ಹಾಗೂ ಕ್ಷ ಕಿರಣ ವಿಭಾಗ ಕಾರ್ಯನಿರ್ವಹಿಸದಿದ್ದನ್ನು ಪ್ರಶ್ನಿಸಿದ ಅವರು ತಂತ್ರಜ್ಞರು ಇಲ್ಲದಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅನೇಕ ಲೋಪದೋಷಗಳಿದ್ದು ಇದನ್ನು ಸರಿಪಡಿಸುವ ಕಾರ್ಯವನ್ನು ಆಡಳಿತ ವೈದ್ಯಾಧಿಕಾರಿ ಮಾಡಬೇಕು, ಇಲ್ಲಿನ ಅವ್ಯವಸ್ಥೆ, ಕರ್ತವ್ಯ ಲೋಪದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಾಗೂ ರಾಜ್ಯ ಕಾನೂನು ಸೇವಾ ಆಯೋಗಕ್ಕೆ ವರದಿ ಸಲ್ಲಿಸುತ್ತೇನೆ ಎಂದರು.
ವಕೀಲರು ಹಾಗೂ ಸೇವಾ ಪ್ರಾಧಿಕಾರದ ಸದಸ್ಯ ಮಂಜುನಾಥರೆಡ್ಡಿ ಇತರರು ಇದ್ದರು.