ಜಿಲ್ಲೆ

ತಾಯಿ ಕುದುರೆಯ ಮೂಕ ರೋಧನೆ

Vijyapura - Shashikant Mendegar

ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಮರಿ ಕುದುರೆ ಸಾವನ್ನಪ್ಪಿದ್ದಿರಿಂದ ತಾಯಿ ಕುದುರೆ ಕಣ್ಣೀರಿಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 52 ಸಾಕ್ಷಿಯಾಗಿದೆ. ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ಮರಿ ಕುದುರೆ ಸಾವನ್ನಪ್ಪಿದ್ರೂ ಸಹ ಸುಮಾರು ಐದಾರು ಗಂಟೆಗಳ ವರೆಗೆ ತಾಯಿ ಕುದುರೆ ತನ್ನ ಮರಿಯ ಶವದ ಬಳಿಯೇ ಮೌನವಾಗಿ ನಿಂತಲ್ಲೇ ನಿಂತಿದೆ. ವೇಗವಾಗಿ ಬಂದ ವಾಹನವೊಂದು ರಸ್ತೆಗೆ ಅಡ್ಡಲಾಗಿ ಬಂದ ಕುದುರೆ ಹಿಂಡಿನಲ್ಲಿದ್ದ ಕುದುರೆ ಮರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮರಿ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದ್ದರಿಂದ ಸ್ಥಳದಿಂದ ಕದಲದ ತಾಯಿ ಕುದುರೆ ಅದೇ ಸ್ಥಳದಲ್ಲಿ ನಿಂತಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಂದಮ್ಮನನ್ನು ಕಳೆದುಕೊಂಡ ಆ ತಾಯಿ ಕುದುರೆಗೆ ತನ್ನ ದುಃಖವನ್ನು ತೋಡಿಕೊಳ್ಳಲು ಮಾತು ಬರುವುದಿಲ್ಲ. ಆದ್ರೂ ಸಹ ಹೆತ್ತ ಕರುಳು ಮೂಕ ರೋಧನೆ ಅನುಭವಿಸುತ್ತಿರುವುದು ಕಂಡು ಬಂದಿತು. ಬೆಳಗ್ಗೆ ಘಟನೆ ನಡೆದಿದ್ದರಿಂದ ಅದೇ ಸ್ಥಳದಲ್ಲಿ ಹೊರಟಿದ್ದ ಖಾಸಗಿ ಶಾಲೆಯ ಶಿಕ್ಷಕ ಜಗದೀಶ ಸಾಲಳ್ಳಿ ಎಂಬುವವರು ಸ್ಥಳೀಯರ ಸಹಾಯದಿಂದ ಮೃತ ಕುದುರೆ ಮರಿಯನ್ನು ರಸ್ತೆ ಬದಿಗೆ ಸರಿಸಿದ್ದಾರೆ. ಆದ್ರೂ ಸಹ ಬೆಳಗ್ಗೆಯಿಂದಲೇ ಅದೇ ರಸ್ತೆ ಪಕ್ಕದಲ್ಲಿ ಬಿದ್ದಿರುವ ಮರಿ ಕುದುರೆಯ ಕಳೆಬರಹದ ಎದುರು ನಿಂತ ಜಾಗದಲ್ಲೇ ನಿಂತಿರುವುದು ಎಂತಹವರ ಮನ ಮಿಡಿಯುವಂತಾಗಿದೆ. ನಾಗರಿಕ ಸಮಾಜದಲ್ಲೇ ಮಾನವೀಯತೆ ಕಡಿಮೆ ಆಗುತ್ತಿರುವ ಇಂತಹ ಸಂದರ್ಭದಲ್ಲಿ ಮೂಕ ಪ್ರಾಣಿಯ ಕುರುಳಿನ ಕೂಗು ಹೃದಯಸ್ಪರ್ಶಿಯಾಗಿದೆ.