ಬಣಕಲ್: ಕುಟುಂಬದ ಆರೋಗ್ಯ ಕಾಪಾಡುವಲ್ಲಿ ತಾಯಂದಿರ ಪಾತ್ರ ತುಂಬ ಮುಖ್ಯ ಎಂದು ತರೀಕೆರೆ ಆಯುರ್ವೇದ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ. ಕಾವ್ಯಾ ಕಿರಣ್ ಹೇಳಿದರು.
ಬಣಕಲ್ ಶ್ರೀ ವಿದ್ಯಾಭಾರತಿ ಶಾಲೆಯಲ್ಲಿ ಪಾಲಕರಿಗಾಗಿ ಆಯೋಜಿಸಿದ್ದ ಆರೋಗ್ಯದೆಡೆಗೆ ನಮ್ಮ ಅಡುಗೆ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿ, ಮನೆಯಲ್ಲಿ ತಾಯಂದಿರು ಶುಚಿ, ರುಚಿಯಾದ ಆಹಾರ ತಯಾರಿಸುತ್ತಾರೆ. ಆರೋಗ್ಯಕ್ಕೆ ಸೂಕ್ತವಾಗಿರುವ ಸೊಪ್ಪು, ತರಕಾರಿಗಳನ್ನು ಹೆಚ್ಚು ಬಳಸಿ ಅಡುಗೆ ತಯಾರಿಸುತ್ತಾರೆ. ಇದರಿಂದ ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಮನೆ ವೈದ್ಯರಂತೆ ಕಾರ್ಯನಿರ್ವಹಿಸುತ್ತಾರೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಶಿವರಾಮ ಶೆಟ್ಟಿ ಮಾತನಾಡಿ, ಶಾಲೆಯಲ್ಲಿ ಪಾಲಕರಿಗೆ ಆಯೋಜಿಸುವ ಕಾರ್ಯಕ್ರಮಗಳಿಂದ ಮಕ್ಕಳಿಗೂ ಗುಣಮಟ್ಟದ ಆಹಾರದ ಬಗ್ಗೆ ಅರಿವು ಮೂಡುತ್ತದೆ. ಮಕ್ಕಳ ಆರೋಗ್ಯ ಕಾಪಾಡಲು ಮನೆಯ ಆಹಾರ ಪದ್ಧತಿ ಸೂಕ್ತವಾಗಿರಬೇಕು ಎಂದು ತಿಳಿಸಿದರು.
ಆಹಾರ ತಯಾರಿಸುವ ಸ್ಪರ್ಧೆಯಲ್ಲಿ 39 ಪಾಲಕಿಯರು ಭಾಗವಹಿಸಿದ್ದರು. ವಿವಿಧ ಅಡುಗೆ ಸ್ಪರ್ಧೆಯಲ್ಲಿ ಪಾಲಕಿಯರಾದ ಪ್ರೀತಿ ಬಣಕಲ್ ಪ್ರಥಮ ಸ್ಥಾನ, ಶಿಲ್ಪಾ ಲಿಂಗಪ್ಪ ಬಣಕಲ್ ದ್ವಿತೀಯ ಸ್ಥಾನ ಪಡೆದರು. ಮಮತಾ ಮತ್ತು ರಾಜೇಶ್ವರಿ ದಿಲೀಪ್ ತೃತೀಯ ಸ್ಥಾನ ಪಡೆದರು. ಸಮಾಧಾನಕರ ಬಹುಮಾನವನ್ನು ಸುಜಾತಾ, ಶಾಲಿನಿ, ಮಮತಾ, ಶಿಲ್ಪಾ, ಮೇದಿನಿ ಪಡೆದುಕೊಂಡರು.
ಸಾಯಿ ಕೃಷ್ಣ ಆಸ್ಪತ್ರೆ ಡಾ. ಚೈತನ್ಯಾ, ಯು.ಪಿ.ರಾಮಚಂದ್ರ ಹೊಳ್ಳ, ಬಿ.ಪಿ.ಲಿಂಗಪ್ಪ, ಟಿ.ಆರ್.ಮಾಲತಿ, ನಾಗರಾಜ್, ವಸಂತ್ ಹಾರ್ಗೋಡು, ಲೀಲಾಮಣಿ, ಭಕ್ತೇಶ್, ಶೇಖರಪ್ಪ, ಗೀತಾ, ಕಮಲಮ್ಮ, ಲಿಂಗರಾಜ್, ಶ್ವೇತಾ, ಪದ್ಮಶ್ರೀ, ವಿಜಯೇಂದ್ರ, ಪ್ರತಾಪ್, ಲೋಕೇಶ್, ಪೂಜಾ, ಅಶ್ವಿತಾ, ಆಶಾ, ಅನುಪ ಇತರರಿದ್ದರು.