ಜಿಲ್ಲೆ

ತಾಮ್ರ ಕೊಡದ ಬಳಿ ಮಳೆ ಭವಿಷ್ಯ !

ಕೊಡೇಕಲ್ : ಮುಂಗಾರು ಆರಂಭದಿAದ ಇದುವರೆಗೆ ಮಳೆಯಾಗದ ಹಿನ್ನೆಲೆಯಲ್ಲಿ ರಾಯನಪಾಳೆ ಗ್ರಾಮಸ್ಥರು ಮಂಗಳವಾರ ತುಂಬಿದ ತಾಮ್ರದ ಕೊಡದ ಪೂಜೆ ನೆರವೇರಿಸಿ ಮಳೆ ಭವಿಷ್ಯ ಕೇಳಿದ್ದಾರೆ.

ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಮಳೆ ಇಲ್ಲದೆ ಜನ-ಜಾನುವಾರುಗಳು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಮಳೆಗಾಗಿ ರೈತರು ನಿತ್ಯ ದೇವರ ಮೊರೆ ಹೋಗುತ್ತಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಮಳೆ ಭವಿಷ್ಯ ತಿಳಿಯಲು ಮುಂದಾಗಿದ್ದು, ಮುಂದಿನ ಮಳೆಗಾಲ ಹೇಗಿರಲಿದೆ? ಉತ್ತಮ ಮಳೆ ಸಾಧ್ಯವೇ ಇಲ್ಲವೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು.

ಪುನರ್ವಸು, ಪುಷ್ಯ, ಆಶ್ಲೇಷ ಮಳೆಗಳ ಹೆಸರು ಕೇಳಿದಾಗ ನೀರು ತುಂಬಿದ ಕೊಡ ತನ್ನಷ್ಟಕ್ಕೆ ತಾನೇ ವೇಗವಾಗಿ ತಿರುಗಿ ಮಳೆ ಭವಿಷ್ಯ ನುಡಿದು ನೆರೆದ ಗ್ರಾಮಸ್ಥರು ಸಂತಸದಲ್ಲಿ ತೇಲುವಂತೆ ಮಾಡಿತು. ಇನ್ನು ಮಘ ಮಳೆ ಸಾಧಾರಣ, ಹುಬ್ಬಿ ಕನಿಷ್ಠವಾಗಿರಲಿದೆ ಎಂಬ ಭವಿಷ್ಯ ಕೊಡ ನುಡಿದಿದೆ.

ಮಳೆಯಾಗದ ಸಂದರ್ಭದಲ್ಲಿ ಪೂರ್ವಜರು ತುಂಬಿದ ತಾಮ್ರದ ಕೊಡದ ಪೂಜೆ ಮೊರೆ ಹೋಗಿ ಭವಿಷ್ಯ ಅರಿಯುತ್ತಿದ್ದರು. ೨೦ ವರ್ಷದ ಹಿಂದೆ ಈ ಪೂಜೆ ನೆರವೇರಿಸಿದಾಗ ಸಮೃದ್ಧ ಮಳೆಯಾಗಿತ್ತು. ಕೊಡ ವೇಗವಾಗಿ ತಿರುಗಿದರೆ ಮಳೆ ಜಾಸ್ತಿ, ಸಾಧಾರಣ ತಿರುಗಿದರೆ ಅಷ್ಟಕ್ಕಷ್ಟೇ ಎಂಬ ನಂಬಿಕೆ ಇದೆ ಎಂದು ಊರಿನ ಹಿರಿಯರಾದ ಬಸಣ್ಣ ಗುಜ್ಜಲ್, ಕೊತಲಪ್ಪ ಬಿಲ್ಲರ್, ಬಸನಗೌಡ ಮಾಲಿಪಾಟೀಲ್ ಹೇಳುತ್ತಾರೆ.