ಭದ್ರಾವತಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನದಿಂದ ರಾಜ್ಯದ ಎಲ್ಲ ತಾಪಂಗಳು ನಿರ್ದಿಷ್ಟ ಪ್ರಮಾಣದ ಅನುದಾನ ಕಾಣುವಂತಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತಾಪಂನಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಲವು ವರ್ಷಗಳಿಂದ ತಾಪಂ ಸದಸ್ಯರಿಗೆ ಸರ್ಕಾರದಿಂದ ಯಾವುದೇ ನಿಶ್ಚಿತ ಅನುದಾನ ಬಿಡುಗಡೆ ಆಗುತ್ತಿರಲಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಅಭಿವೃದ್ಧಿ ಕಷ್ಟವಾಗಿತ್ತು ಎಂದರು.
ಯಡಿಯೂರಪ್ಪ ಅವರು ಮೊದಲ ಬಾರಿ ಸಿಎಂ ಆದಾಗ ಗ್ರಾಪಂಗಳಿಗೆ 1 ಕೋಟಿ ರೂ. ಅನುದಾನ ಕೊಡುವ ಯೋಜನೆ ಜಾರಿಗೆ ತಂದು ಗ್ರಾಮಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದರು. ಈಗ 2 ಕೋಟಿ ರೂ. ನೀಡಲಾಗುತ್ತಿದೆ. ಹೊಸ ತಾಪಂ ಕಟ್ಟಡ ನಿರ್ವಣಕ್ಕೆ ಶಾಸಕರು ಬೇಡಿಕೆ ಇಟ್ಟಿದ್ದು ಅದನ್ನೂ ಶೀಘ್ರ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ್, ಸಂಸದರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರ ಎಂಪಿಎಂ ಆರಂಭಿಸಿ 2 ಸಾವಿರ ಜನರಿಗೆ ಉದ್ಯೋಗ, ನೂತನ ತಾಪಂ ಹಾಗೂ ತಾಲೂಕು ಕಚೇರಿ ನಿರ್ವಣಕ್ಕೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಎಂಪಿಎಂ ಭೂಮಿ 30 ವರ್ಷ ಲೀಸ್ಗೆ: ಎಂಪಿಎಂ ಕಾರ್ಖಾನೆ ಉಳಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ. ಬಂಡವಾಳ ತೊಡಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿವೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು. ಎಂಪಿಎಂ ಭೂಮಿಯನ್ನು ಕಾರ್ಖಾನೆ ಹೆಸರಲ್ಲೇ ಮುಂದಿನ 30 ವರ್ಷಗಳವರೆಗೂ ಲೀಸ್ ಆಧಾರದಲ್ಲಿ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಆಗಸ್ಟ್ ಅಂತ್ಯದೊಳಗೆ ಎಲ್ಲ ಪ್ರಕ್ರಿಯೆ ಮುಗಿಯಲಿದೆ ಎಂದರು. ವಿಐಎಸ್ಎಲ್ ಗೊಂದಲಗಳನ್ನು ಸಹ ನಿವಾರಿಸಲಾಗುವುದು. ಕ್ಷೇತ್ರದ ರಸ್ತೆ, ಸಮುದಾಯ ಭವನಗಳ ನಿರ್ಮಾಣ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಶಾಸಕರು ಹಲವು ಬೇಡಿಕೆ ಇಟ್ಟಿದ್ದು, ಸೇತುವೆಯಾಗಿ ನಿಂತು ಕೆಲಸ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್, ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಾಪಂ ಸದಸ್ಯರಾದ ಧಮೇಗೌಡ, ಕೆ.ಮಂಜುನಾಥ್, ಲಕ್ಷ್ಮೀದೇವಿ, ರುದ್ರಪ್ಪ, ತಿಪ್ಪೇಶ್ರಾವ್, ನಾಗರಾಜ್, ತಹಸೀಲ್ದಾರ್ ಶಿವಕುಮಾರ್, ಇಒ ಎಂ.ಕೊಟ್ರೇಶಪ್ಪ ಇತರರಿದ್ದರು.