ಜಿಲ್ಲೆ

ತಾಪಂ ಇಒ ಅಮಾನತು ಹಿಂದಕ್ಕೆ

ಬೀದರ್: ಚಟ್ನಳ್ಳಿ ಗ್ರಾಪಂ ವ್ಯಾಪ್ತಿಯ ಬರಿದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಅಧಿಕ ಜನ ಅಸ್ವಸ್ಥರಾದ ಘಟನೆ ಸಂಬಂಧ ತಾಲೂಕು ಪಂಚಾಯಿತಿ ಇಒ ಮಾಣಿಕರಾವ್ ಪಾಟೀಲ್ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ.
ಪಾಟೀಲ್ ಕಾರ್ಯನಿರ್ವಹಿಸುತ್ತಿರುವ ಅವಧಿಯಲ್ಲಿ ಹೊರಿಸಲಾದ ಆರೋಪಕ್ಕೆ ಸಂಬಂಧಿಸಿದಂತೆ, ಮುಂದಿನ ಸೇವಾವಧಿಯಲ್ಲಿ ಈ ರೀತಿಯ ಕರ್ತವ್ಯ ಲೋಪ ಪುನರಾವರ್ತನೆಯಾಗದಂತೆ ಮತ್ತು ಸರ್ಕಾರಿ ಸೇವೆ ನಿಷ್ಠೆಯಿಂದ ನಿರ್ವಹಿಸುವಂತೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಆದೇಶಿಸಲಾಗಿದೆ. ಸರ್ಕಾರ ವರ್ಗಾವಣೆ ಮಾಡಿರುವ ಹುದ್ದೆಯ ಸ್ಥಳಕ್ಕೆ ಹಾಜರಾಗಲು ಅನುಮತಿಸಿದೆ ಎಂದು ಜಿಪಂ ಸಿಇಒ ಶಿಲ್ಪಾ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಬರಿದಾಬಾದ್ ಘಟನೆ ಕುರಿತು ಮೇಲಕಾರಿಗಳಿಗೆ ವರದಿ ಸಲ್ಲಿಸಿಲ್ಲ. ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಪೂರೈಸುವುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ. ಇದರ ಮೇಲ್ವಿಚಾರಣೆ ಮಾಡುವುದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಜವಾಬ್ದಾರಿ. ಸರ್ಕಾರದ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಜು.31ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ. ಮಾಣಿಕರಾವ್ ಪಾಟೀಲ್ ಕಮಲನಗರ ತಾಪಂ ಇಒ ಆಗಿ ಅಧಿಕಾರ ವಹಿಸಿಕೊಂಡಿದರು.