ಜಿಲ್ಲೆ

ತಾಪಂ ಅಧಿಕಾರಿ ವಿರುದ್ಧ ಲಂಚ ಆರೋಪ; ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಸಾಗರದ ಕುಟುಂಬ

ಸಾಗರ: ತಾಲೂಕು ಪಂಚಾಯಿತಿ ಅಧಿಕಾರಿ ಲಂಚದ ಬೇಡಿಕೆ ಇಟ್ಟಿದ್ದು, ಅದನ್ನು ಭರಿಸಲು ನಮ್ಮ ಕುಟುಂಬದಿಂದ ಸಾಧ್ಯವಿಲ್ಲದ ಕಾರಣ ನಮಗೆ ದಯಾಮರಣ ನೀಡಬೇಕು ಎಂದು ಸಾಗರದ ಶ್ರೀಕಾಂತ್ ನಾಯ್ಕ ಕುಟುಂಬದವರು ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಹತ್ತು ತಿಂಗಳಿಂದ ತಾಪಂ ಅಧಿಕಾರಿ ನಮ್ಮ ಜಮೀನು ನಗರ ಪ್ರದೇಶಕ್ಕೆ ಹತ್ತಿರವಿದ್ದ ಕಾರಣ ಯೋಜನಾ ಆಯೋಗದಿಂದ ಭೂ ಮಂಜೂರಾತಿಯನ್ನು ಮಾಡಿಸಿ, ಅದು ಅನುಮೋದನೆಗೊಂಡು ತಾಪಂಗೆ ನಿವೇಶನ ಬಿಡುಗಡೆ ಮಾಡಲು ಒಪ್ಪಿಗೆ ಪಡೆಯಲು ಅಲೆಯುತ್ತಿದ್ದೇವೆ. ಆದರೆ ಅಧಿಕಾರಿಗಳು ನಮಗೆ ಅನುಮೋದನೆಗೊಂಡ ನಿವೇಶನ ಬಿಡುಗಡೆ ಮಾಡಲು 10 ಲಕ್ಷ ರೂ. ಲಂಚದ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ನಾನು ಬಡ ಜಮೀನು ಮಾಲಿಕನಾಗಿದ್ದರಿಂದ ಲಂಚವನ್ನು ನೀಡಲಿಲ್ಲ ಹಾಗೂ ಲಂಚ ಕೇಳಿದ ವಿಚಾರ ಸಾರ್ವಜನಿಕವಾಗಿ ಬಹಿರಂಗವಾಗಿದೆ ಎಂದು ದ್ವೇಷದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಲ್ಲಸಲ್ಲದ ಕಾರಣವನ್ನು ಹೇಳಿ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ನೊಂದು ಆರೋಗ್ಯದಲ್ಲಿಯೂ ವ್ಯತ್ಯಾಸಗಳು ಆಗುತ್ತಿವೆ.

ನಮ್ಮ ಜಮೀನಿನ ಭೂ ಮಂಜೂರಾತಿಯಾದ ಜಾಗದಲ್ಲಿ ನಿವೇಶನ ಬಿಡುಗಡೆ ಮಾಡಬಾರದು ಎಂದು ಯಾವುದೇ ಕಾನೂನಿನಲ್ಲಿ ತಡೆಯಾಜ್ಞೆಗಳು ಇಲ್ಲದಿದ್ದರೂ ಅನವಶ್ಯಕವಾಗಿ ದ್ವೇಷದಿಂದ ದಿನಕ್ಕೊಂದು ಕಾನೂನು ಕಾರಣ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿಯನ್ನು ನೀಡಿ ಮೂರು ತಿಂಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಟ ನಡೆಸಿದ್ದೇನೆ. ಭ್ರಷ್ಟ ವ್ಯವಸ್ಥೆಯು ನಮ್ಮ ಜೀವನವೇ ಮುಳುಗಿಹೋಗುವ ಹಂತಕ್ಕೆ ತಲುಪಿದೆ. ಅಧಿಕಾರಿಗಳ ವ್ಯವಸ್ಥೆಯಿಂದ ಬೇಸರವಾಗಿದೆ. ಇದರಿಂದ ಮನನೊಂದ ನಮ್ಮ ಕುಟುಂಬಕ್ಕೆ ಈಗ ದಯಾಮರಣವೇ ಗತಿಯಾಗಿದೆ. ಆದ್ದರಿಂದ ರಾಷ್ಟ್ರಪತಿಗಳು ನಮ್ಮ ದಯಾಮರಣದ ಮನವಿಯನ್ನು ಸ್ವೀಕರಿಸಿ ನಮ್ಮ ಮನವಿಗೆ ಅವಕಾಶವನ್ನು ನೀಡಬೇಕು ಎಂದು ಶ್ರೀಕಾಂತ್ ನಾಯ್ಕ ದಂಪತಿ ಮನವಿಯಲ್ಲಿ ಕೋರಿದ್ದಾರೆ.

ಸತ್ಯಕ್ಕೆ ದೂರ: ಈ ಪ್ರಕರಣದಲ್ಲಿ ನಾವು ಯಾವುದೇ ಆಮಿಷವನ್ನು ಒಡ್ಡಿಲ್ಲ, ಇದು ಸತ್ಯಕ್ಕೆ ದೂರವಾಗಿರುತ್ತದೆ. ಈಗಾಗಲೇ ಖಂಡಿಕ ಗ್ರಾಮ ಪಂಚಾಯಿತಿ, ಸಾಗರ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮೇಲೆ ಉಚ್ಛನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಅದು ಇನ್ನೂ ಇತ್ಯರ್ಥವಾಗಿಲ್ಲ. ಈಗ ನಾವು ಯಾವುದೇ ನಿರ್ಣಯವನ್ನು ಕೈಗೊಳ್ಳುವಂತಿಲ್ಲ ಎನ್ನುತ್ತಾರೆ ಸಾಗರ ತಾಪಂ ಇಒ ಪುಷ್ಪ್ಪಾ ಎಂ.ಕಮ್ಮಾರ್.