ಜಿಲ್ಲೆ

ತಾತ್ಕಾಲಿಕ ಸೇತುವೆಯೂ ಕೊಚ್ಚಿಹೋಯ್ತು

ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಪರ‌್ಯಾಯ ಮಾರ್ಗ | ಹೆಚ್ಚಿನ ನೀರಿನ ರಭಸ

 ಗೌರಿಬಿದನೂರು : ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗೌರಿಬಿದನೂರು - ಚಿಕ್ಕಬಳ್ಳಾಪುರ ಮಾರ್ಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಯೂ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ನಗರದ ಮಧ್ಯದಲ್ಲಿ ಹಾದುಹೋಗುವ ರಾಷ್ಟೀಯ ಹೆದ್ದಾರಿ 69 ರಾಜ್ಯದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ. ಹೆದ್ದಾರಿಯಲ್ಲಿ ಬರುವ ಉತ್ತರ ಪಿನಾಕಿನಿ ನದಿ ಅಡ್ಡಲಾಗಿ ನಿರ್ಮಿಸಿದ್ದ ಹಳೇ ಸೇತುವೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ತೆರವುಗೊಳಿಸಿ ದ್ವಿಚಕ್ರ ವಾಹನಗಳ ಸಂಚಾರಕ್ಕೆಂದು ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ನಂದಿಗಿರಿ ಪರ್ವತ ಶ್ರೇಣಿಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಕ್ಕಲಮಡಗು, ಶ್ರೀನಿವಾಸ ಸಾಗರ, ದಂಡಿಗಾನಹಳ್ಳಿ, ಮಂಚೇನಹಳ್ಳಿ ಭಾಗದಲ್ಲಿರುವ ಕೆರೆಗಳಲು ತುಂಬಿ ಅಪಾರ ಪ್ರಮಾಣದ ನೀರು ಉತ್ತರ ಪಿನಾಕಿನಿ ನದಿಗೆ ಹರಿದು ಬರುತ್ತಿದೆ. ಇದರಿಂದ ನದಿ ಉಕ್ಕಿ ಹರಿಯುತ್ತಿದ್ದು ನೀರಿನ ರಭಸಕ್ಕೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.

ಪರ್ಯಾಯ ಮಾರ್ಗ

ಸೇತುವೆ ಕೊಚ್ಚಿ ಹೋಗಿರುವುದರಿಂದ ಈ ಭಾಗದ ಪ್ರಯಾಣಿಕರು ನಗರಕ್ಕೆ ಬರಲು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಯಾವುದೇ ಮುಂದಾಲೋಚನೆ ಮಾಡದೆ ಮಳೆಗಾಲದಲ್ಲಿ ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಅಲ್ಲದೆ ಕೇವಲ ಕೆಲವು ಕೊಳವೆಗಳನ್ನು ಅಳವಡಿಸಿ ಕಳಪೆಯಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾತ್ಕಾಲಿಕ ಸೇತುವೆಯೂ ಕೊಚ್ಚಿ ಹೋಗಿದೆ. ಹಳೇ ಸೇತುವೆಯಲ್ಲಿ ದ್ವಿಚಕ್ರ ಹಾಗೂ ಆಟೋರಿಕ್ಷಾ ಸಂಚರಿಸುವಷ್ಟು ಮಾತ್ರ ಸ್ಥಳಾವಕಾಶವಿದೆ. ಅದನ್ನೂ ತೆರವುಗೊಳಿಸಿದಲ್ಲಿ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಲಿದೆ.