ಜಿಲ್ಲೆ

ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡುವಂತೆ ಪಟ್ಟು

 ತೊರೆಚನ್ನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಮಾಗಡಿ : ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಚನ್ನಹಳ್ಳಿ ಬಳಿ ಮಳೆಗೆ ಸಂಪರ್ಕ ಸೇತುವೆ ಕುಸಿದು ಬಿದ್ದ ಪರಿಣಾಮ ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಸೇತುವೆ ಬಳಿ ಗ್ರಾಮಸ್ಥರು ಪ್ರತಿಭಟಿಸಿದರು.

ಸೇತುವೆಯ ಬಳಿ ಅಳವಡಿಸಲಾಗಿದ್ದ ಕುಡಿಯುವ ನೀರಿನ ಪೈಪ್‌ಲೈನ್, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಹಾಲಿನ ವಾಹನ ತೆರಳಲು ಸಾಧ್ಯವಾಗದ ಕಾರಣ ತೊಂದರೆಯಾಗಿದೆ. ಪ್ರತಿನಿತ್ಯ ಕೂಲಿಮಾಡಲು ಮಾಗಡಿ ತೆರಳುವ ಕಾರ್ಮಿಕರಿಗೂ ಪರದಾಟ ಶುರುವಾಗಿದೆ. ಶಾಲೆ, ಕಾಲೇಜುಗಳಿಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ತುರ್ತಾಗಿ ಸೇತುವೆ ನಿರ್ಮಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವ ಜತೆಗೆ ಗ್ರಾಮದಿಂದ ವಿಧಾನಸೌಧದವರೆಗೂ ಪಾದಯಾತ್ರೆಗೆ ತೆರಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ತೊರೆಚನ್ನಹಳ್ಳಿ ಗ್ರಾಪಂ ಸದಸ್ಯ ಶಿವಕುಮಾರ್ ಮಾತನಾಡಿ, ಭಾರಿ ಮಳೆಯಿಂದಾಗಿ ಸೇತುವೆ ಕೊಚ್ಚಿಹೋಗಿದೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಮಂದಿ ಇದ್ದು, ಆರೋಗ್ಯ ಹದಗೆಟ್ಟರೂ ಚಿಕಿತ್ಸೆ ಕೊಡಿಸಲು ಸಾಧ್ಯವಾಗದಂತಾಗಿದೆ ಎಂದರು.

ಸೋಲೂರು ಹೋಬಳಿ, ಕಸಬಾ ಹೋಬಳಿಯ ಮಧ್ಯೆ ಈ ಸೇತುವೆ ಇದ್ದು, ಸೇತುವೆಯ ಬಳಿ ಗುಂಡಿ ಬಿದ್ದಿದ್ದನ್ನು ನೋಡಿಕೊಂಡೆ ಈ ಸೇತುವೆ ಮೂಲಕ ಅಧಿಕಾರಿಗಳು ಮೊಟಗಾನಹಳ್ಳಿ, ನೆಲಮಂಗಲಕ್ಕೆ ತೆರಳುತ್ತಿದ್ದರು. ಆದರೆ ಸೇತುವೆ ರಿಪೇರಿ ಮಾಡಲು ಮುಂದಾಗಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಿದ್ದ ಪರಿಣಾಮ ಗ್ರಾಮಸ್ಥರು ಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿ ಮೇಘನಾ ಮಾತನಾಡಿ, ಸೇತುವೆ ಮುರಿದು ಬಿದ್ದಿದ್ದು, ಪರೀಕ್ಷೆಗೆ ತೆರಳಲು ಸಾಧ್ಯವಾಗಿಲ್ಲ. ಈ ಸೇತುವೆ ನಿರ್ಮಿಸಿಕೊಟ್ಟರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಗ್ರಾಮಸ್ಥರಾದ ಶಂಕರ್, ನಾರಾಯಣ, ಹನುಮಂತಯ್ಯ, ಮಂಜುನಾಥ್, ಕೆಂಪಗುಡ್ಡಯ್ಯ, ಜಯರಾಮು, ವೆಂಕಟೇಶ್, ರತ್ನಮ್ಮ, ಸಿದ್ದಮ್ಮ,ಬೈಲವೆಂಕಟಮ್ಮ, ಸಹನಾ ಇತರರು ಇದ್ದರು.