ಹಾಸನ: ನಾನು ಜಿಪಂ ಸದಸ್ಯನಾಗಿ, ರಾಜಕೀಯವಾಗಿ ಬೆಳೆದು ಸಂಸದನಾಗಿದ್ದೇನೆ. ಏಕಾಏಕಿ ಕುಟುಂಬದ ಹೆಸರಿನಲ್ಲಿ ಜನಪ್ರತಿನಿಧಿ ಆಗಿರುವುದು, ಉದ್ಭವ ರೀತಿಯಲ್ಲಿ ಎದ್ದು ಬಂದಿರೋದು ಅವರು ಎಂದು ತಮ್ಮ ವಿರುದ್ಧ ಜೆಡಿಎಸ್ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಮಾಡಿದ್ದ ವಾಗ್ದಾಳಿಗೆ ಸಂಸದ ಶ್ರೇಯಸ್ ಪಟೇಲ್ ತಿರುಗೇಟು ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಒಮ್ಮೆಯಷ್ಟೇ ಪರಿಷತ್ ಸದಸ್ಯರಾಗಿದ್ದಾರೆ. ಅವರು ಗೆದ್ದ ಮೇಲೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಗ್ರಾಪಂಗೆ ಹೋಗಿ ಸಭೆ ಮಾಡಿದ್ದಾರಾ? ತಾತನ ಹೆಸರಿನಿಂದ ಎಂಎಲ್‌ಸಿ ಆಗಿರುವ ಅವರ ಸಾಧನೆ ಏನು ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಅವರ ಹೇಳಿಕೆ ನನಗೆ ವೈಯಕ್ತಿಕವಾಗಿ ನೋವಾಗಿದೆ. ರಾಜಕೀಯವಾಗಿ ಅವರು, ನಾನು ಎದುರಾಳಿಯೆ. ಆದರೆ ಆದರೆ ನಮ್ಮ ತಾತನ ಹೆಸರು ಹೇಳಿ ಮಾತಾಡಿದ್ದು ಬೇಜಾರಾಗಿದೆ. ನಾನು ಕೇವಲ ತಾತನ ಹೆಸರು ಹೇಳಿಕೊಂಡು ಬಂದಿಲ್ಲ. ಹೋರಾಟ ಮಾಡಿ ಕಷ್ಟದಿಂದ ರಾಜಕೀಯಕ್ಕೆ ಮೇಲೆ ಬಂದವನು. ಇದ್ದವರ ಬಗ್ಗೆ ಮಾತಾಡಲಿ, ನಾನೇನಾದರೂ ದೇವೇಗೌಡರ ಬಗ್ಗೆ ಎಂದಾದರೂ ಮಾತನಾಡಿದ್ದೇನಾ? ಇವತ್ತೂ ಕೂಡ ಹಿರಿಯರ ಮೇಲೆ ತುಂಬಾ ಗೌರವ ಇದೆ. ದೇವೇಗೌಡರು, ಪುಟ್ಟಸ್ಚಾಮಿಗೌಡರು, ಶ್ರೀಕಂಠಯ್ಯ, ನಂಜೇಗೌಡರ ಬಗ್ಗೆ ಮಾತಾಡಲು ನಮಗೆ ಅರ್ಹತೆ ಮತ್ತು ಯೋಗ್ಯತೆ ಇಲ್ಲ ಎಂದರು.
ಇವರು ಏಕಾಏಕಿ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ. ಯಾವುದೇ ಪುರಾವೆ ಇಲ್ಲದೆ ಮಾತಾಡಿದ್ದಾರೆ. 25 ವರ್ಷದ ಹಿಂದೆ ಆ್ಯಸಿಡ್ ದಾಳಿ ನಡೆದಾಗ ಇವರ ವಯಸ್ಸು ಎಷ್ಟಿತ್ತು ಎಂದು ಯೋಚಿಸಲಿ. ಅವರ ಹೇಳಿಕೆ ಶುದ್ಧ ಸುಳ್ಳು. ಈ ಬಗ್ಗೆ ಅವರ ತಂದೆ ರೇವಣ್ಣ ಯಾಕೆ ಮಾತಾಡಿಲ್ಲ. ಅವರ ಅಜ್ಜಿ ನಮಗೂ ಅಜ್ಜಿ ಸಮಾನರು, ನಮ್ಮ ಅಜ್ಜಿ ಅವರು ಒಟ್ಟಿಗೆ ಇದ್ದವರು. ಅವರು ಅಥವಾ ಅವರ ಕುಟುಂಬದ ಇತರರು ಯಾಕೆ ಈ ಬಗ್ಗೆ ಮಾತಾಡಿಲ್ಲ ಎಂದು ಕೇಳಿದರು.
ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡೆಯುತ್ತಾರೆ ಅಂತ ಮಾತನಾಡಿದ್ದಿರಾ? ಪೆನ್‌ಡ್ರೈವ್ ವಿಚಾರವಾಗಿ ನಾನು ಮಾತನಾಡಲ್ಲ. ಇದರಿಂದ ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ. ಅನೇಕರು ಬಲಿಪಶು ಆಗಿದ್ದಾರೆ. ಅದಕ್ಕೆ ಕಾರಣ ಯಾರು, ಪೆನ್‌ಡ್ರೈವ್ ಒಳಗಿದ್ದ ವಿಡಿಯೋ ಮಾಡಿದ್ದು ಯಾರು? ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಚಾಟಿ ಬೀಸಿದರು.
ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿಯ ಮಾತುಗಳು ಬರುತ್ತೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ. ಎಲ್ಲೇ ಹೋದರೂ ಕಿತಾಪತಿ ಮಾಡುತ್ತಾರೆ. ಯಾವ ಊರಿಗೆ ಹೋದರೂ ಕಿತಾಪತಿ ಮಾಡಿ ಬರೋದು ಅವರ ಕೆಲಸ ಎಂದು ದೂರಿ, ನಾನು ಅವರ ಪಕ್ಷದ ಕಾರ್ಯಕರ್ತನ ಮೇಲೆ ಪ್ರಕರಣ ಹಾಕಿಸಿದ್ದರೆ ದಾಖಲೆ ಕೊಡಲಿ. ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿವೆ. ಅವರ ಪಕ್ಷದ ಕಾರ್ಯಕರ್ತನ ಮೇಲೆ ಏಕ್ ಕೇಸ್ ಹಾಕುತ್ತಾರೆ. ದೇವೇಗೌಡರ ಕುಟುಂಬದಿಂದ ಬಂದವರು, ಆ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. 2028ರ ಚುನಾವಣೆಯಲ್ಲಿ ಯಾರು ಏನಾಗುತ್ತಾರೆ ಎಂಬುದು ಗೊತಾಗುತ್ತೆ. ಈಗಾಗಲೇ ಜನ ಬುದ್ಧಿ ಕಲಿಸಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತೆ ಮಂಗಳಾರತಿ ಮಾಡುತ್ತಾರೆ. ಎಂದು ಭವಿಷ್ಯ ನುಡಿದರು.
ಸಾರಿಗೆ ಬಸ್ ದರ ಏರಿಕೆ ಕುರಿತು ಮಾತನಾಡಿದ ಶ್ರೇಯಸ್, ಇಂಧನ ದರ ಜಾಸ್ತಿ ಆಗಿದೆ. 7ನೇ ವೇತನ ಆಯೋಗ ಜಾರಿ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಬೆಲೆ ಏರಿಕೆ ಸರ್ವೆ ಸಾಮಾನ್ಯ. ಜೀವನ ನಿರ್ವಹಣೆ ವೆಚ್ಚ ಜಾಸ್ತಿ ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ, ಎಲ್ಲ ರಾಜ್ಯಗಳು ಮಾಡಿವೆ. ರಾಜ್ಯದ ಜನರು ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.