ನರೇಗಲ್ಲ: ಪಟ್ಟಣದ ಕೇವಲ 50 ಜನರಿಗೆ ತಾಡಪತ್ರಿಗಳನ್ನು ವಿತರಿಸುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ ಕಾರಣ ಲಾಟರಿ ಪ್ರಕ್ರಿಯೆ ಕೆಲಕಾಲ ಸ್ಥಗಿತಗೊಂಡಿತು.
ನರೇಗಲ್ಲ, ಅಬ್ಬಿಗೇರಿ, ಗೋಗೇರಿ, ಹಾಲಕೆರೆ, ಜಕ್ಕಲಿ, ಕುಂಟೋಜಿ, ಕುರಡಗಿ, ಲಕ್ಕಲಕಟ್ಟಿ, ಮಾರನಬಸರಿ, ನಿಡಗುಂದಿ, ರಾಂಪುರ, ರಾಜೂರ, ಉಣಚಗೇರಿ ಗ್ರಾಪಂ ವ್ಯಾಪ್ತಿಯ 1470 ರೈತರು ತಾಡಪತ್ರಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 500 ಮಂದಿಗೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಲಾಟರಿ ಎತ್ತಿ ತಾಡಪತ್ರಿ ವಿತರಿಸಲಾಯಿತು. ಆಗ ಸ್ಥಳದಲ್ಲಿದ್ದ ರೈತರು ತಾಡಪತ್ರಿ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿದರು.
ರೈತ ಶೇಖಪ್ಪ ಕಳಕಣ್ಣವರ ಮಾತನಾಡಿ, ನರೇಗಲ್ಲದಲ್ಲಿ ಶೇ. 80ಕ್ಕೂ ಹೆಚ್ಚು ರೈತರಿದ್ದಾರೆ. 532 ಜನರು ತಾಡಪತ್ರಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, 50 ಜನರಿಗೆ ವಿತರಿಸುತ್ತಿರುವುದು ಅವೈಜ್ಞಾನಿಕ. ನರೇಗಲ್ಲ ರೈತರಿಗೆ 200 ತಾಡಪತ್ರಿ ವಿತರಿಸಬೇಕು. ನರೇಗಲ್ಲ, ದ್ಯಾಂಪುರ, ಮಲ್ಲಾಪುರ, ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ ರೈತರಿಗೆ 50 ತಾಡಪತ್ರಿ ವಿತರಿಸಿ ಅನ್ಯಾಯ ಮಾಡಲಾಗುತ್ತಿದೆ. ಕಳೆದ ವರ್ಷ ಲಾಟರಿ ಮೂಲಕ ರೈತರನ್ನು ಆಯ್ಕೆ ಮಾಡದೆ ಬೇಕಾಬಿಟ್ಟಿಯಾಗಿ ವಿತರಿಸಲಾಗಿದೆ. ಈಗ ಲಾಟರಿ ಮೂಲಕ ವಿತರಿಸಲಾಗುತ್ತಿದೆ. ಕಳೆದ ಬಾರಿ ತಾಡಪತ್ರಿ ಪಡೆದವರೇ ಈ ಬಾರಿಯೂ ಆಯ್ಕೆಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಅಧಿಕಾರಿ ವೀರೇಶ ಗಡಾದ ಅವರು ರೈತರನ್ನು ಸಮಾಧಾನಪಡಿಸಿ, ಇಲಾಖೆ ಆದೇಶದಂತೆ ತಾಡಪತ್ರಿ ವಿತರಿಸಲಾಗುತ್ತಿದೆ. ಹೆಚ್ಚು ತಾಡಪತ್ರಿಗಳನ್ನು ನೀಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರೋಣದಲ್ಲಿ ಕೇವಲ 520 ರೈತರಿಗೆ ಹಂಚಿಕೆ
ರೋಣ: ಕೃಷಿ ಇಲಾಖೆಯಿಂದ ರೈತರಿಗೆ ಕೊಡಮಾಡುವ ತಾಡಪತ್ರಿಗಳಿಗೆ ಮಿತಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದರಿಂದ ಪಟ್ಟಣದ ಎಪಿಎಂಸಿಯಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ, 940 ಅರ್ಜಿಗಳು ಸಲ್ಲಿಕೆಯಾಗಿದ್ದರಿಂದ ಲಾಟರಿ ಮೂಲಕ 520 ರೈತರಿಗೆ ತಾಡಪತ್ರಿಗಳನ್ನು ಸೋಮವಾರ ವಿತರಿಸಲಾಗುವುದು. ರೈತರು ತಮ್ಮ ಆಧಾರ್ ಕಾರ್ಡ ತರಬೇಕು. ಉಳಿದವರಿಗೆ ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದರು. ಕೃಷಿ ಸಹಾಯಕ ಅಧಿಕಾರಿಗಳಾದ ಎಸ್.ಆರ್. ದೊಡ್ಡಮನಿ, ಎಸ್.ಆರ್. ಶಾಂತಗೇರಿ, ತಾಲೂಕಿನ ವಿವಿಧ ಗ್ರಾಮದ ರೈತರು ಇದ್ದರು.
ಕೊಣ್ಣೂರ ರೈತ ಸಂಪರ್ಕ ಕೇಂದ್ರದಲ್ಲಿ ನೂಕುನುಗ್ಗಲು
ನರಗುಂದ: ಕೃಷಿ ಇಲಾಖೆಯ ರಿಯಾಯಿತಿ ದರದ ತಾಡಪತ್ರಿ ಪಡೆಯಲು ತಾಲೂಕಿನ ಕೊಣ್ಣೂರ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ನೂಕುನುಗ್ಗಲು ಉಂಟಾಯಿತು.
ತಾಲೂಕಿನ ರೈತರಿಂದ ಸೆಪ್ಟೆಂಬರ್ನಲ್ಲಿ ತಾಡಪತ್ರಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ನರಗುಂದ ಹೋಬಳಿಗೆ 2015, ಕೊಣ್ಣೂರ ಹೋಬಳಿಗೆ 1188 ಅರ್ಜಿಗಳು ಸಲ್ಲಿಕೆಯಾಗಿದ್ದವು. ನರಗುಂದ ಹೋಬಳಿಗೆ 730, ಕೊಣ್ಣೂರ ಹೋಬಳಿಗೆ 692 ತಾಡಪತ್ರಿಗಳು ಪೂರೈಕೆಯಾಗಿರುವುದೇ ನೂಕುನುಗ್ಗಲಿಗೆ ಕಾರಣವಾಯಿತು. ನರಗುಂದ ರೈತ ಸಂಪರ್ಕ ಕೇಂದ್ರಕ್ಕೆ ಪೂರೈಕೆಯಾದ 730 ತಾಡಪತ್ರಿಗಳಲ್ಲಿ 670 ಸಾಮಾನ್ಯ, 40 ಎಸ್ಸಿ, 20 ಎಸ್ಟಿ ಫಲಾನುಭವಿಗಳಿಗೆ ವಿತರಿಸಬೇಕು. ಕೊಣ್ಣೂರ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಪೂರೈಕೆಯಾದ 692 ತಾಡಪತ್ರಿಗಳಲ್ಲಿ 625 ಸಾಮಾನ್ಯ, 45 ಎಸ್ಸಿ, 22 ಎಸ್ಟಿ ರೈತರಿಗೆ ವಿತರಿಸಬೇಕಾಗಿದೆ. ಆದರೆ, ಸಲ್ಲಿಕೆಯಾದ ಅರ್ಜಿಗಳು ಹೆಚ್ಚಿದ್ದು, ಬಂದ ತಾಡಪತ್ರಿಗಳು ಕಡಿಮೆ ಇರುವುದರಿಂದ ಅಧಿಕಾರಿಗಳು ಪೊಲೀಸರ ಸರ್ಪಗಾವಲಿನಲ್ಲಿ ಲಾಟರಿ ಮೂಲಕ ತಾಡಪತ್ರಿಗಳನ್ನು ರೈತರಿಗೆ ವಿತರಿಸಿದರು.