ಜಿಲ್ಲೆ

ತಾಜಸುಲ್ತಾನಪುರದಲ್ಲಿ ಹೆಣ್ಣು ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ

ಬಾಬುರಾವ ಯಡ್ರಾಮಿ

ತಾಜಸುಲ್ತಾನಪುರದಲ್ಲಿ ಜರುಗಿದ ಹೃದಯ ವಿದ್ರಾವಕ ಘಟನೆ ; ಮಮ್ಮಲು ಮರುಗಿದ ಜನರು

ವಿಜಯವಾಣಿ ಸುದ್ದಿಜಾಲ ಕಲಬುರಗಿ
  ಐದು ವರ್ಷದ ಹೆಣ್ಣು ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದಲ್ಲಿರುವ ತಾಜಸುಲ್ತಾನಪುರದಲ್ಲಿ ನಡೆದಿದೆ.
ಹೀರಾಬಾಯಿ ನಾಗಣ್ಣ ದುಬಲಗುಂಡಿ (೩೮) ಮತ್ತು ಸೌಜನ್ಯ (೫) ಮೃತಪಟ್ಟಿರುವ ತಾಯಿ-ಮಗು. ಆತ್ಮಹತ್ಯೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ.
ಹದಿನಾರು ವರ್ಷಗಳ ಹಿಂದೆ ಮದುವೆಯಾಗಿತ್ತು. ಒಂದುವರೆ ವರ್ಷದ ಹಿಂದೆ ಹೀರಾಬಾಯಿ ಪತಿ ನಾಗಣ್ಣ ಕ್ಯಾನ್ಸರ್‌ನಿಂದ ಬಳಲಿ ನಿಧನರಾಗಿದ್ದರು. ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿವೆ. ಉಳಿದ ಮೂರು ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಸೋಮವಾರ ಮಗಳು ಸೌಜನ್ಯ ಜತೆಗೆ ಹೊರ ಹೋದಾಕೆ ಮರಳಿ ಬಂದಿರಲಿಲ್ಲ. ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಮಂಗಳವಾರ ಗ್ರಾಮದ ಹೊರವಲಯದ ಜಮೀನಿನ ಬಾವಿಯೊಂದರಲ್ಲಿ ಶವ ಪತ್ತೆಯಾಗಿವೆ. ಅಗ್ನಿ ಶಾಮಕದಳ ಸಿಬ್ಭಂದಿ ಸಹಾಯದೊಂದಿಗೆ ಶವಗಳನ್ನು ಹೊರ ತೆಗೆಯಲಾಯಿತು.
ಘಟನೆಗೆ ಇಡಿ ಗ್ರಾಮವೇ ಮಮ್ಮಲುಮರುಗುತ್ತಿದ್ದು, ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.