ಜಿಲ್ಲೆ

ತಾಕತ್ತಿದ್ದರೆ ಮೇಕೆದಾಟು ಹೋರಾಟಗಾರರಿಗೆ ದಂಡ ಹಾಕಿ

ಕೊಟ್ಟೂರು ಪಪಂ ಸಿಬ್ಬಂದಿಗೆ ಚಪ್ಪರದಹಳ್ಳಿ ಗ್ರಾಮಸ್ಥ ಮೂಗಪ್ಪ ಸವಾಲು

ಕೊಟ್ಟೂರು: ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಬಂದಿದ್ದ ಪಪಂ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಘಟನೆ ಮಂಗಳವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯಿತು.

ಮೇಕೆದಾಟು ಹೋರಾಟದಲ್ಲಿ ಹತ್ತು ಸಾವಿರ ಜನ ಪಾದಯಾತ್ರೆ ಮಾಡುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ಅಲ್ಲಿಗೆ ಹೋಗಿ ಮಾಸ್ಕ್ ಧರಿಸದೆ ಹಾಗೂ ದೈಹಿಕ ಅಂತರ ಕಾಪಾಡದವರಿಗೆ ದಂಡ ವಿಧಿಸಿ ನೋಡೋಣವೆಂದು ಚಪ್ಪರದಹಳ್ಳಿ ಮೂಗಪ್ಪ ಸವಾಲು ಹಾಕಿದರು.

ನಿಮಗೆ ದೊಡ್ಡವರ‌್ಯಾರೂ ಕಣ್ಣಿಗೆ ಕಾಣೋದಿಲ್ವ?. ನಮ್ಮಂತಹ ಬಡಪಾಯಿಗಳು ಮಾತ್ರವೇ ಕಾಣ್ತೀವಿ ಅಲ್ವ?. ಹಳ್ಳಿಯಿಂದ ಬೆಲ್ಲ, ಬೇಳೆ, ಚಹಾಪುಡಿ ತರೋಕೆ ಬಂದೀವಿ. ನಿಮಗೆ ನೂರು ರೂ. ದಂಡ ಕಟ್ಟಿದರೆ ಮನೆಗೇನು ಕೊಂಡೊಯ್ಯಬೇಕೆಂದು ಹ್ಯಾಳ್ಯಾದ ರೈತ ಚನ್ನ ಬಸಪ್ಪ ಪಪಂ ಸಿಬ್ಬಂದಿಯನ್ನು ಪ್ರಶ್ನಿಸಿದರು.

ದಂಡ ವಸೂಲಿ ಮಾಡಿದ ಹಣವನ್ನು ಸರ್ಕಾರಕ್ಕೆ ಕಟ್ಟುತ್ತೀರೊ ಇಲ್ಲ ನಿಮ್ಮ ಜೇಬಿಗೆ ಇಳಿಸಿಕೊಳ್ಳುತ್ತೀರೋ ಎಂದು ಹುಣಸಿಕಟ್ಟೆ ರೈತ ಕೊಟ್ರೇಶ ದಂಡದ ರಸೀದಿ ಹಿಡಿದುಕೊಂಡು ದಂಡ ವಸೂಲಿದಾರರನ್ನು ಕೆಣಕಿದ ಪರಿ ಇದು.

ಗೋಳು ಕೋಳೋರ‌್ಯಾರು: ದಂಡ ವಸೂಲಿಗೆ ನಿಯೋಜನೆಗೊಂಡ ಹೆಸರು ಹೇಳಲು ಇಚ್ಛಿಸದ ಪಪಂ ಸಿಬ್ಬಂದಿ, ಜಿಲ್ಲಾಧಿಕಾರಿ ದಿನಕ್ಕೆ ಮಾಸ್ಕ್ ಧರಿಸದ ನೂರು ಜನಕ್ಕೆ ತಲಾ ನೂರು ರೂ. ದಂಡ ವಿಧಿಸಲು ಆದೇಶಿಸಿದ್ದಾರೆ. ಇದಕ್ಕಾಗಿ ಪಪಂನಿಂದ ನಾಲ್ಕೈದು ಜನ ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ಕಡ್ಡಾಯವಾಗಿ ನೂರು ಜನರಿಗೆ ದಂಡ ಹಾಕಬೇಕು. ಇಲ್ಲಾಂದ್ರೆ ನಮಗೆ ನೋಟಿಸ್ ಕೊಡ್ತಾರೆ. ಅಲ್ಲಿ ಪಪಂ ಕೆಲಸ ನಿಂತಿದೆ. ಪಂಚಾಯಿತಿಗೆ ಬಂದ ಜನರು ಸಿಬ್ಬಂದಿ ಇಲ್ಲವೆಂದು ಬೈಯುತ್ತಿದ್ದರೆ ಇತ್ತ ದಂಡ ವಸೂಲಿ ವೇಳೆಯೂ ನಾಗರಿಕರಿಂದ ಬೈಗುಳ ತಪ್ಪದಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.