ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇವಿಎಂ, ಇಸಿ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಹುಚ್ಚಾಟ ನಡೆಸಿದ್ದಾರೆ.
ತಾಕತ್ ಇದ್ದರೆ 136 ಕಾಂಗ್ರೆಸ್ ಶಾಸಕರು, 9 ಸಂಸದರು ರಾಜೀನಾಮೆ ಪಡೆದು ಮತ್ತೊಮ್ಮೆ ಚುನಾವಣೆ ಎದುರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ಜನರಿಗೆ ಇವಿಎಂ ಮೇಲೆ ವಿಶ್ವಾಸವಿದೆ. ದೇಶ ಮುನ್ನಡೆಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆ ಎಂದು ನಂಬಿರುವ ಮತದಾರರು, ಕಾಂಗ್ರೆಸ್ ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅದ್ದರಿಂದಲೇ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಸತ್ಯ ಅರ್ಥಮಾಡಿಕೊಳ್ಳದೆ ರಾಹುಲ್‌ಗಾಂಧಿ ಕೇಂದ್ರದ ಮೇಲೆ ಗೂಭೆ ಕೂರಿಸುತ್ತಿದ್ದಾರೆ ಎಂದರು.
ಬಿಹಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೆಂದು ಅವರಿಗೆ ಗೊತ್ತಾಗಿದೆ. ಮತ್ತೊಂದು ಸೋಲನ್ನು ಎದುರು ನೋಡುತ್ತಿದ್ದಾರೆ. ಹಾಗಾಗಿ ಸೋಲಿಗೆ ಕುಂಟುನೆಪ ಹುಡುಕುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶ ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಗೆ ಉತ್ತರಿಸಲು ಕೇಂದ್ರ ಜಿಎಸ್‌ಟಿ ಕುರಿತಂತೆ ದಿಟ್ಟ ನಿರ್ಧಾರ ಕೈಗೊಂಡಿದೆ. ಜನ ಈಗಲೂ ಗ್ಯಾರಂಟಿ ಅವಲಂಬಿಸಬೇಕೆಂದಾದರೆ ಕಾಂಗ್ರೆಸ್ 55-60 ವರ್ಷ ಯಾವ ರೀತಿಯಲ್ಲಿ ಅಧಿಕಾರ ನಡೆಸಿತ್ತು? ಸರ್ಕಾರಿ ಖಾಲಿ ಹುದ್ದೆಗಳು ಭರ್ತಿ ಆಗುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ನಷ್ಟ ಪರಿಹಾರದ ಬಗ್ಗೆ ಮಾತನಾಡದ ಕಾಂಗ್ರೆಸ್, ಮಾನ, ಮರ‌್ಯಾದೆ ಬಿಟ್ಟು ವಿಶೇಷ ವಿಮಾನ, ಹೆಲಿಕಾಫ್ಟರ್ ಖರೀದಿಗೆ ಮುಂದಾಗಿದೆ ಎಂದು ಆಪಾದಿಸಿದರು.
ಹುಂಡಿ ಹಣಕ್ಕೆ ಮೊರೆ: ಗ್ಯಾರಂಟಿಗಳಿಂದಾಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹುಂಡಿ ಹಣಕ್ಕೆ ಮೊರೆ ಹೋಗಿದ್ದಾರೆ. ತೆಲಂಗಾಣದಲ್ಲಿ ಸಂಬಳ ಕೊಡಲು ದುಡ್ಡಿಲ್ಲ, ಕರ್ನಾಟಕದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಶ್ವೇತ ಪತ್ರ ಹೊರಡಿಸಬೇಕೆಂಬ ನಮ್ಮ ಆಗ್ರಹ ಕೇಳುಸುತ್ತಿಲ್ಲವೆಂದು ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದರು.
ಪಕ್ಷಕ್ಕೆ ಹೋಬಳಿ ಕೇಂದ್ರಗಳಲ್ಲಿ ಸಿಎ ಸೈಟ್ ಕೊಡುವ ಕಾಂಗ್ರೆಸ್ ನಿರ್ಧಾರ ಖಂಡಿಸಿದರು.
ಪಕ್ಷಾತೀತ ಕರೆ: ಧರ್ಮಸ್ಥಳ ಚಲೋ ಪಕ್ಷಾತೀತ ಕರೆಯಾಗಿತ್ತು. ಶ್ರೀ ಕೇತ್ರ ಮಂಜುನಾಥನ ಕೋಟ್ಯಂತರ ಭಕ್ತರಿಗೆ ಕಾಂಗ್ರೆಸ್ ಸರ್ಕಾರದಿಂದ ನೋವಾಗಿದೆ. ಮಂಜುನಾಥನ ವಿಚಾರದಲ್ಲಿ ರಾಜಕಾರಣ ಮಾಡಿದರೆ ಯಾರಿಗೂ ಒಳ್ಳೆಯದಾಗದು. ಕ್ಷೇತ್ರದ ಪಾವಿತ್ರೃ ಹಾಳು ಮಾಡಲು ಷಡ್ಯಂತ್ರ ನಡೆಸಿರುವಂಥವರನ್ನು ಬಯಲಿಗೆ ಎಳೆಯಬೇಕು ಎಂದರು.
ಬಿರಿಯಾನಿ
ಬೇಲ್ ಸಿಕ್ಕಿದೆ ಎಂದು ಸಮೀರ್‌ಗೆ ಬಿರಿಯಾನಿ ತಿನ್ನಿಸದೆ ಒದ್ದು ಒಳಗೆ ಹಾಕಲಿ. ಸೌಜನ್ಯ ವಿಚಾರದಲ್ಲಿ ನಮ್ಮ ಹೇಳಿಕೆಗೆ ಈಗಲೂ ಬದ್ಧ, ರಾಜಕಾರಣ ಮಾಡಲು ನಾವು ಅವರ ನಿವಾಸಕ್ಕೆ ಹೋಗಿಲ್ಲ. ಮುಡಾ ವಿಚಾರದಲ್ಲಿ ಕ್ಲೀನ್‌ಚಿಟ್ ಪಡೆದಿರುವ ಸಿಎಂ ಭಂಡತನ ಮೆರೆಯುತ್ತಿದ್ದಾರೆ. ತಾವು ಅಪರಾಧಿ ಹೌದೋ ಅಲ್ಲವೋ ಎಂದು ಅವರ ಮನಸಾಕ್ಷಿ ಕೇಳಿಕೊಳ್ಳಲಿ ಎಂದು ಸಿದ್ದರಾಮಯ್ಯ ಅವರನ್ನು ತಿವಿದರು.
ಶ್ರೀಗಳ ಭೇಟಿ: ನಗರದ ಶ್ರೀಕೃಷ್ಣ ಯಾದವ ಮಹಾಸಂಸ್ಥಾನಕ್ಕೆ ಭೇಟಿ ನೀಡಿದ ವಿಜಯೇಂದ್ರ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಆರ್ಶೀವಾದ ಪಡೆದರು. ಈ ವೇಳೆ ಕಾಡಗೊಲ್ಲರನ್ನು ಎಸ್‌ಟಿಗೆ ಸೇರಿಸಬೇಕೆಂಬ ಮನವಿಯನ್ನು ಸುಮದಾಯದ ಮುಖಂಡರು ಅವರಿಗೆ ಸಲ್ಲಿಸಿದರು. ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್. ನವೀನ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಪಟೇಲ್ ಶಿವಕುಮಾರ್, ಮಾಧುರಿ ಗಿರೀಶ್, ಭಾರ್ಗವಿ ದ್ರಾವಿಡ, ಸಿ.ಟಿ. ಕೃಷ್ಣಮೂರ್ತಿ, ಕೆ.ಸಿ. ರಮೇಶ್, ಸುರೇಶ್, ಹನುಮಂತಪ್ಪ, ವೀರಪಂಜಪ್ಪ, ಕದರ ಪ್ಪ, ಮುರುಳಿ, ಸಂಪತ್, ಕೂನಿಕೆರೆ ರಾಮಣ್ಣ, ಬಾಳೆಕಾಯಿ ರಾಮದಾಸ್, ಲೋಕೇಶ್, ಮೋಹನ್ ಮತ್ತಿತರರು ಇದ್ದರು.
----
ಕಾಡುಗೊಲ್ಲರ ಎಸ್‌ಟಿ ಸೇರ್ಪಡೆ ಬೇಡಿಕೆ
ರಾಜ್ಯದ ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಬೇಕೆಂಬ ಸಮುದಾಯದ ಬೇಡಿಕೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯ ಬೇಕಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಿದ್ದರು. ಈ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ಸಿಗಬೇಕಿದೆ. ಅದಕ್ಕಾಗಿ ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಈ ಸಮುದಾಯಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
---------------