ಕೊಡೇಕಲ್: ತಾಂಡಾದ ಮನೆಗಳಿಗೆ ನೀರು ಸ್ಥಗಿತಗೊಂಡು ೧೫ ದಿನ ಕಳೆಯುತ್ತಾ ಬಂದರೂ ಸಂಬಂಧಿತ ಅಧಿಕಾರಿ ನಿರ್ಲಕ್ಷ್ಯದಿಂದ ಮಾರನಾಳ ದೊಡ್ಡ ತಾಂಡಾದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಕೇಳರ‍್ಯಾರು ಎಂಬಂತಾಗಿದೆ.
ಈ ತಾಂಡಾ ಮಾರನಾಳ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದು, ೨ ಸಾವಿರದಿಂದ ೨೫೦೦ರವರೆಗೆ ಜನಸಂಖ್ಯೆ ಹೊಂದಿದೆ. ೫೦೦ಕ್ಕೂ ಹೆಚ್ಚು ಮನೆ ಹೊಂದಿರುವ ಈ ತಾಂಡಾದಲ್ಲಿ ೪ರಿಂದ ೫ ಕೊಳವೆಬಾವಿಗಳಿವೆ. ಆದರೆ ಅವುಗಳಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದುವೇ ಈಗ ಆಸರೆಯಾದಂತಾಗಿದೆ.
ಈ ಮೊದಲು ತಾಂಡಾದಲ್ಲಿ ಐದು ಕೊಳವೆಬಾವಿ ಕೆಲಸ ಮಾಡುತ್ತಿದ್ದವು. ಆದರೆ ಭೀಕರ ಬರ ಮತ್ತು ಅಂತರ್ಜಲ ಮಟ್ಟ ಕುಸಿತದಿಂದ ನಾಲ್ಕು ಬಾವಿಗಳ ಅಂತರ್ಜಲ ಕುಸಿದಿದ್ದರಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ. ಇರುವ ಒಂದು ಕೊಳವೆಬಾವಿ ಜನರಿಗೆ ನೀರುಣಿಸುತ್ತಿದೆ.
ಗ್ರಾಮದಲ್ಲಿರುವ ಬಾವಿಯಿಂದ ತಾಂಡಾದ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಬಾವಿಯಲ್ಲಿನ ನೀರೆತ್ತುವ ಯಂತ್ರ ಕೆಟ್ಟಿದ್ದರಿಂದ ೧೫ ದಿನಗಳಿಂದ ನಳಗಳಿಗೆ ನೀರು ಪೂರೈಕೆ ಮಾಡುವಲ್ಲಿ ಸಮಸ್ಯೆಯಾಗಿದ್ದರಿಂದ ಜನತೆ ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ನಳಗಳಿಗೆ ನೀರು ಪೂರೈಕೆಯಾಗದ ಕಾರಣ ತಾಂಡಾದಲ್ಲಿ ಕರ‍್ಯನಿರ್ವಹಿಸುತ್ತಿರುವ ಈ ಏಕೈಕ ಕೊಳವೆಬಾವಿ ಸದಾ ಜನರಿಂದ ಗೀಜಿಗುಡುತ್ತಿದೆ. ಬೆಳಗ್ಗೆಯಿಂದ ತಡರಾತ್ರಿವರೆಗೆ ಈ ಕೊಳವೆಬಾವಿ ಎದುರು ಕಿರಿಯರು, ಹಿರಿಯರು ಅಷ್ಟೇ ಅಲ್ಲ ವೃದ್ದರು ಕೂಡ ಕೊಡು ಹಿಡಿದುಕೊಂಡು ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಅನತಿ ದೂರದಲ್ಲಿರುವ ಈ ತಾಂಡಾದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಆದರೆ ಗ್ರಾಪಂ ಇದಕ್ಕು ನಮಗು ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದರಿಂದ ತಾಂಡಾದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಜನತೆ ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಿದ್ದರೂ ದುರಸ್ತಿಗೆ ಮುಂದಾಗದ ಕಾರಣ ಇನ್ನೇನು ಜನರು ಗ್ರಾಪಂ ಎದುರು ಉಗ್ರ ಪ್ರತಿಭಟನೆ ಮಾಡುವ ಕಾಲ ಬಹಳ ಸನಿಹ ಬಂದAತಾಗಿದೆ. ಆಗಲಾದರೂ ಗ್ರಾಪಂ ಎಚ್ಚೆತ್ತುಕೊಳ್ಳುತ್ತದೆ ಎಂಬುದುನ್ನು ಕಾದು ನೋಡಬೇಕಾಗಿದೆ. ತಾಂಡಾದಲ್ಲಿ ಜಲಜೀವನ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಆದರೆ ಈವರೆಗೂ ಕಾಮಗಾರಿ ಆರಂಭವಾಗದಿರುವುದು ತೀವ್ರ ಬೇಸರ ತರಿಸಿದೆ.
ಈಗಲಾದರೂ ಗ್ರಾಪಂ ಎಚ್ಚರಗೊಂಡು ನೀರಿನ ಸಮಸ್ಯೆಗೆ ಸ್ಪಂದಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ತಾಂಡಾದ ಜನತೆಗೆ ಖಾಲಿ ಕೊಡು ಹಿಡಿದು ಗ್ರಾಪಂ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾರನಾಳ ದೊಡ್ಡ ತಾಂಡಾದಲ್ಲಿ ನಳಗಳಿಗೆ ನೀರು ಸರಬರಾಜು ಸ್ಥಗೀತಗೊಂಡ ಕಾರಣ ಕೊಳವೆಬಾವಿ ಎದುರುನ ನೀರಿಗಾಗಿ ಕಾಯುತ್ತಿರುವ ಜನತೆ