ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ಪ್ಲೇಗಿನಮ್ಮ ಮತ್ತು ಸಂತ ಸೇವಾಲಾಲರ ದೇವಾಲಯದ ಉದ್ಘಾಟನೆ, ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಭಾಗವಹಿಸಿದ್ದರು. ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ , ರಾಜಾನಾಯ್ಕ ಕುಮಾರನಾಯ್ಕ, ಪ್ರಕಾಶನಾಯ್ಕ, ಸತೀಶನಾಯ್ಕ ಇತರರಿದ್ದರು. 
ಜಿಲ್ಲೆ

ತಾಂಡಾಗಳ ಅಭಿವೃದ್ಧಿಗೆ ಅನುದಾನ

ಕಡೂರು: ಬಂಜಾರ ಸಮಾಜ ಬಡತನದಿಂದ ಕೂಡಿದ್ದರೂ ಧಾರ್ಮಿಕವಾಗಿ ಅಪಾರ ನಂಬಿಕೆ ಹೊಂದಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಸೋಮನಹಳ್ಳಿ ತಾಂಡಾದ ಪ್ಲೇಗಿನಮ್ಮ ಮತ್ತು ಸಂತ ಸೇವಾಲಾಲರ ನೂತನ ದೇವಾಲಯ ಉದ್ಘಾಟನೆ, ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಆರು ವರ್ಷಗಳ ಪರಿಶ್ರಮದ ಫಲವಾಗಿ ದೇವಾಲಯ ನಿರ್ಮಾಣವಾಗಿದೆ. ಪುಟ್ಟ ಗ್ರಾಮ ಆದರೂ ದೇವರ ಮೇಲಿನ ನಂಬಿಕೆಯಿಂದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿದ್ದಾರೆ ಎಂದರು.

ಆದರ್ಶ ಪುರುಷ ಸೇವಾಲಾಲ ಅವರನ್ನು ದೈವ ಸ್ವರೂಪದಲ್ಲಿ ಭಕ್ತಿಯಿಂದ ಆರಾಧಿಸುತ್ತಾರೆ. ಮೌಢ್ಯ ಮತ್ತು ಶೋಷಣೆ ವಿರುದ್ಧ ಹೋರಾಡಿದ ಅವರಿಗಾಗಿ ರಾಜ್ಯದ ಪ್ರತಿ ತಾಂಡಾದಲ್ಲಿಯೂ ದೇವಾಲಯ ನಿರ್ಮಾಣ ಮಾಡಿ ಪೂಜಿಸಲಾಗುತ್ತದೆ ಎಂದರು.

ಸೋಮನಹಳ್ಳಿ ಮತ್ತು ವಿ.ಯರದಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ದಲಿತರು, ಹಿಂದುಳಿದ ವರ್ಗದ ಬಡವರು ಹೆಚ್ಚಾಗಿರುವುದರಿಂದ ಅಭಿವೃದ್ಧಿಗೆ ಒತ್ತು ನೀಡಿ ಅನೇಕ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಎಂಟು ಕೋಟಿ ರೂಪಾಯಿಯಲ್ಲಿ ಈ ಭಾಗದ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವುದರ ಮೂಲಕ ಎಲ್ಲ ರೀತಿಯ ಅಭಿವೃದ್ಧಿ ಮಾಡಲಾಗುವುದು. ಮಲ್ಲಾಘಟ್ಟ ಮತ್ತು ವಿಷ್ಣುಸಮುದ್ರ ಕೆರೆಗೆ ನೀರು ತರುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯ ಪೂರ್ಣಗೊಂಡರೆ ಸಿಂಗಟಗೆರೆ ಮತ್ತು ಪಂಚನಹಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸಲಾಗುವುದು. ನಗದಿಯಾತ್ ಕಾವಲಿನಲ್ಲಿ ಸದ್ಯದಲ್ಲೇ ಗಾರ್ಮೆಂಟ್ಸ್ ಪ್ರಾರಂಭ ಆಗಲಿದೆ ಎಂದರು.

ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮಿಜಿ, ಕೆ.ಬಿದರೆ ದೊಡ್ಡ ಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಾಜಾನಾಯ್ಕ ಬೆಂಗಳೂರು, ಕುಮಾರನಾಯ್ಕ, ಪ್ರಕಾಶನಾಯ್ಕ, ಸತೀಶನಾಯ್ಕ, ಅಣ್ಣಾನಾಯ್ಕ, ಮಲ್ಲೇಶ್‌ನಾಯ್ಕ, ಶ್ರೀನಿವಾಸನಾಯ್ಕ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.