ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಮೌಢ್ಯತೆಗೆ ಅಂಟಿಕೊಂಡು ಋತುಮತಿ ಹೆಣ್ಣುಮಕ್ಕಳು, ಬಾಣಂತಿಯರನ್ನು ಊರ ಹೊರಗಿಡುತ್ತಿದ್ದ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ದೇವರದೊಡ್ಡಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ರಾಮನಗರ ತಹಸೀಲ್ದಾರ್ ವಿಜಯಕುಮಾರ್ ಹಾಗೂ ತಾಪಂ ಇಒ ಶಿವಕುಮಾರ್ ಅವರು ಮೂಢನಂಬಿಕೆ ತೊರೆಯುವಂತೆ ಜನರ ಮನವೊಲಿಸಿದ್ದ ಪ್ರಯತ್ನ ಭಾನುವಾರ ಕಂಡಿದೆ.
ಕಾಡುಗೊಲ್ಲ ಸಮುದಾಯ ಹೆಚ್ಚಾಗಿರುವ ಗ್ರಾಮದಲ್ಲಿ ಹಿಂದಿನಿಂದಲೂ ಋತುಮತಿ ಹೆಣ್ಣುಮಕ್ಕಳು, ಬಾಣಂತಿಯರನ್ನು ಕೆಲವು ದಿನಗಳವರೆಗೆ ಊರ ಹೊರಗಿನ ಜೋಪಡಿಯಲ್ಲಿಡುವ ಸಂಪ್ರದಾಯ ಅನುಸರಿಸಿಕೊಂಡು ಬರಲಾಗುತ್ತಿದೆ. ಆಧುನಿಕ ಕಾಲದಲ್ಲೂ ಇಂಥ ಮೌಢ್ಯವನ್ನು ಆಚರಿಸಲಾಗುತ್ತಿದೆ ಎಂಬ ವಿಷಯ ತಿಳಿದ ತಹಸೀಲ್ದಾರ್ ಎಂ.ವಿಜಯಕುಮಾರ್ ಅಧಿಕಾರಿಗಳ ಜೊತೆ ಶನಿವಾರ ಬೆಳಗ್ಗೆಯೇ ದೇವರದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವತೆ ಅರಿತುಕೊಂಡರು. ಜತೆಗೆ ಗ್ರಾಮದ ಮುಖಂಡರ ಜತೆ ಮಾತನಾಡಿ, ಮೌಢ್ಯತೆ ಬಿಟ್ಟು ಊರೊಳಗೆ ಗುಡಿಸಲಿನಲ್ಲಿದ್ದ 23 ದಿನದ ಬಾಣಂತಿ ಮಗುವನ್ನು ಮನೆಗೆ ಕರೆತರಲು ಪ್ರಯತ್ನಿಸಿದ್ದರು.
ಆದರೆ, ಇದಕ್ಕೆ ಅಡ್ಡಿಪಡಿಸಿದ್ದ ಗ್ರಾಮದ ಮುಖಂಡರು, ಶನಿವಾರ ಸಂಜೆ ಸಭೆ ಸೇರಿ ಒಳ್ಳೆಯ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಶನಿವಾರ ಸಂಜೆ ಮುಖಂಡರ ಸಭೆ ನಡೆಯದಿರುವ ಮಾಹಿತಿ ಅಧಿಕಾರಿಗಳನ್ನು ತಲುಪಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯೇ ದೇವರದೊಡ್ಡಿಗೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ವಿ.ರಾಮನ್, ಗ್ರಾಮಸ್ಥರ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ತೊಂದರೆಯಾಗದಂತೆ ಎಲ್ಲ ಕ್ರಮ: ಹಿಂದಿನಿಂದಲೂ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಋತುಮತಿಯರು, ಬಾಣಂತಿಯರು, ನವಜಾತ ಶಿಶುವಿಗೆ ತೊಂದರೆ ಆಗದ ರೀತಿಯಲ್ಲಿ ಎಚ್ಚರವಹಿಸಲಾಗುತ್ತಿದೆ. ಕುಲದೇವರ ಆಣತಿಯಂತೆ ನಡೆದುಕೊಳ್ಳುತ್ತಿದ್ದೇವೆ. ಗೊಲ್ಲರಹಟ್ಟಿಗಳ ಮುಖಂಡರ ಸಭೆ ಕರೆದು, ಈ ಬಗ್ಗೆ ಚರ್ಚಿಸುತ್ತೇವೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.
ಗ್ರಾಮಸ್ಥರ ಮನವಿಯನ್ನು ನಯವಾಗಿ ತಿರಸ್ಕರಿಸಿದ ಸಿ.ವಿ.ರಾಮನ್, ಮೌಢ್ಯ ಆಚರಣೆಯಿಂದ ಸಣ್ಣ ಮಕ್ಕಳಿಗೆ ಆಗುವ ತೊಂದರೆ, ಹೆಣ್ಣುಮಕ್ಕಳು ಅನುಭವಿಸುವ ತೊಂದರೆಗಳನ್ನು ಎಳೆಎಳೆಯಾಗಿ ವಿವರಿಸಿದರು. ಜತೆಗೆ ಮೂಢನಂಬಿಕೆ ಆಚರಣೆಯಿಂದಾಗುವ ತೊಂದರೆಗಳ ಬಗ್ಗೆ ಹಿರಿಯ ಮಹಿಳೆಯರು, ಗ್ರಾಮದ ಮುಖ್ಯಸ್ಥರು, ಮುಖಂಡರಲ್ಲಿ ತಿಳಿವಳಿಕೆ ಮೂಡಿಸಿದರು. ಮುಂದೆ ಇಂಥ ಆಚರಣೆಗಳನ್ನು ಮಾಡದಂತೆ ಸೂಚಿಸಿ, ಗುಡಿಸಲಿನಲ್ಲಿದ್ದ ಬಾಣಂತಿ, ನವಜಾತ ಶಿಶುವನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದರು.
ಇನ್ನಾದರೂ ಕೊನೆಯಾಗುವುದೇ?: ಋತುಮತಿಯರು, ಬಾಣಂತಿಯರನ್ನು ಗ್ರಾಮದ ಹೊರಗಿನ ಜೋಪಡಿಗಳಲ್ಲಿ ಇರಿಸುವ ಕ್ರಮವನ್ನು ತುಂಬಾ ಹಿಂದಿನಿಂದಲೂ ಆಚರಿಸಲಾಗುತ್ತಿದೆ. 1994ರಲ್ಲಿ ಕೂಡ ಗ್ರಾಮಕ್ಕೆ ಬಂದಿದ್ದ ಆಗಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ಸಚಿವರು ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿ ಮೌಢ್ಯ ಆಚರಣೆ ಕೈಬಿಡುವಂತೆ ತಿಳಿಸಿದ್ದರು. ಆಗಲೂ ಬಾಣಂತಿ ಹಾಗೂ ನವಜಾತ ಶಿಶುವನ್ನು ಊರೊಳಗೆ ಕರೆತಂದಿದ್ದರು. ಆದರೆ ಅವರ ಪ್ರಯತ್ನ ನಂತರದಲ್ಲಿ ವ್ಯರ್ಥವಾಗಿತ್ತು. ಗ್ರಾಮಸ್ಥರು ಮೌಢ್ಯಾಚರಣೆ ಮುಂದುವರಿಸಿಕೊಂಡು ಬರಲಾರಂಭಿಸಿದ್ದರು. ಇದೀಗ ಮತ್ತೊಮ್ಮೆ ತಹಸೀಲ್ದಾರ್ ಅವರು ಭೇಟಿ ನೀಡಿ ಮೌಢ್ಯಾಚರಣೆಗೆ ಬ್ರೇಕ್ ಹಾಕಿದೆ. ಆದರೆ, ಇದು ಶಾಶ್ವತವಾಗಿ ಮುಂದುವರಿಯುವ ಬಗ್ಗೆ ಈಗಲೂ ಅನುಮಾನಗಳು ವ್ಯಕ್ತವಾಗುತ್ತಿವೆ.
ಪಿಡಿಒ ಗೋಮತಿ, ಬನ್ನಿಕುಪ್ಪೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಧನಲ್ಮ, ಶುಶ್ರೂಷಕಿ ವೀಣಾ, ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ಆಶಾ ಕಾರ್ಯಕರ್ತೆ ಜ್ಯೋತಿ, ಮುಖಂಡ ಚಂದ್ರಗಿರಿ, ಕಾಡುಗೊಲ್ಲ ಸಂದ ಕಾರ್ಯದರ್ಶಿ ರಮೇಶ್ ಯಾದವ್, ಸದಸ್ಯರಾದ ಕುಮಾರ್, ಮಹಾಲಿಂಗಯ್ಯ, ಚಿತ್ತಮ್ಮ, ಗಿರಿಗಮ್ಮ, ರಾವೇಂದ್ರ ಮತ್ತಿತರರಿದ್ದರು.
ಗ್ರಾಮದ ಜನರಿಗೆ ಮೌಢ್ಯತೆಯ ಅರಿವು ಮೂಡಿಸಿ, ಅವರ ಮನವೊಲಿಸಿ ಊರ ಹೊರಗಿನ ಗುಡಿಸಲಿನಲ್ಲಿದ್ದ ಬಾಣಂತಿ, ನವಜಾತ ಶಿಶುವನ್ನು ದೇವರದೊಡ್ಡಿಯ ಮನೆಗೆ ಕರೆತಂದು ಬಿಟ್ಟಿದ್ದೇವೆ. ಗ್ರಾಮಸ್ಥರು ಈ ಆಚರಣೆಯನ್ನು ನಿಲ್ಲಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಜತೆಗೆ ಬಾಣಂತಿ ಹಾಗೂ ಮಗುವನ್ನು ಸ್ವಾಗತಿಸಿದ್ದಾರೆ. ಸಿ.ವಿ. ರಾಮನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ