ಜಿಲ್ಲೆ

ತಹಸೀಲ್ದಾರ್ ಸೇರಿ ಐವರ ವಿರುದ್ಧ ದೂರು ದಾಖಲು

ಮೈಸೂರು: ಕೈಗಾರಿಕೆ ಉದ್ದೇಶಕ್ಕೆ ಮುಡಾದಿಂದ ಅನ್ಯಕ್ರಾಂತಗೊಂಡಿರುವ ಜಾಗವನ್ನು ನಕಲಿ ದಾಖಲೆ ಮೂಲಕ ಬೇರೆಯವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಪೌತಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ತಹಸೀಲ್ದಾರ್ ಹಾಗೂ ಇಬ್ಬರು ಮಹಿಳೆಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಚೆನ್ನೈ ಮೂಲದ ತಿರುಮಲೈ ರೋಲರ್ ಪ್ರೋರ್ ಮಿಲ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ 2.06 ಎಕರೆ ಜಾಗವನ್ನು ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ತಹಸೀಲ್ದಾರ್ ಅವರು ಜಯಲಕ್ಷ್ಮೀ ಬಾಯಿ ಹಾಗೂ ಜಯಶ್ರೀ ಎಂಬುವರಿಗೆ ಪೋತಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಬಿ.ಶ್ರೀಕಂಠಪ್ಪ ಅವರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೈಸೂರು ಕಸಬಾ ಹೋಬಳಿ ವ್ಯಾಪ್ತಿ ವಿಶ್ವೇಶ್ವರನಗರಕ್ಕೆ ಸೇರಿದ ಸರ್ವೆ ನಂ 155/2 ರಲ್ಲಿ 2.06 ಗುಂಟೆ ಎಕರೆ ಜಮೀನನ್ನು 1975 ರಲ್ಲಿ ಆರ್.ವೆಂಕಟಪ್ಪ ಅವರ ಹೆಸರಿನಲ್ಲಿ ಅನ್ಯಕ್ರಾಂತ ಮಾಡಿಸಲಾಗಿತ್ತು. ಬಳಿಕ 1982ರಲ್ಲಿ ತಿರುಮಲೈ ರೋಲರ್ ಪ್ರೋರ್ ಮಿಲ್ ಪ್ರೈವೇಟ್ ಲಿಮಿಟೆಡ್ ನ ಅಧಿಕೃತ ನಿರ್ದೇಶಕರಾಗಿದ್ದ ನರಸಿಂಹಣ್ಣ ಅವರು ಜಮೀನಿನ ಮಾಲೀಕತ್ವ ಹೊಂದಿದ್ದ ಆರ್.ವೆಂಕಟಪ್ಪ, ವೆಂಕಾರಾಮ್, ಕೃಷ್ಣ ಅವರಿಂದ ಪಡೆದು ನೋಂದಣಿ ಮಾಡಿಸಿದ್ದರು. ಆದರೆ ನೋಂದಣಿ ಪತ್ರವನ್ನು ಕಂಪನಿಗೆ ಒಪ್ಪಿಸದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದು, 1999ರಲ್ಲಿ ನರಸಿಂಹಣ್ಣ ನಿಧನರಾಗಿದ್ದರಿಂದ ದಾಖಲೆ ಪತ್ರಗಳು ಅವರ ಕುಟುಂಬದಲ್ಲಿಯೇ ಉಳಿದಿತ್ತು.
ಇದರ ಆಧಾರದ ಮೇಲೆ ಗ್ರಾಮ ಲೆಕ್ಕಿಗ ನಾಗೇಶ್ ಎಂಬುವರು ನರಸಿಂಹಣ್ಣ ಅವರ ಪತ್ನಿ ಜಯಲಕ್ದ್ಮಿಭಾಯಿ, ಪುತ್ರಿ ಜಯಶ್ರೀ ಅವರಿಗೆ ಪೋತಿ ಖಾತೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕಂದಾಯ ನಿರೀಕ್ಷಕ, ತಹಸೀಲ್ದಾರ್ ಸಹಕಾರ ನೀಡಿದ್ದಾರೆ. ಆದ್ದರಿಂದ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ನನಗೆ ಜೀವಭಯ ಇರುವುದರಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.