ಜಿಲ್ಲೆ

ತಹಸಿಲ್ ಕಚೇರಿಯಲ್ಲಿ ವಿದ್ಯುತ್ ವ್ಯತ್ಯಯ

ಹೂವಿನಹಡಗಲಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಆಯಿತು. ಸರ್ಕಾರಿ ಸೇವೆ ಪಡೆಯಲು ಬಂದಿದ್ದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ತಹಸಿಲ್ ಕಚೇರಿಯ ವಿದ್ಯುತ್ ಪರಿವರ್ತಕದಲ್ಲಿ ಬುಧವಾರ ಹಾಗೂ ಗುರುವಾರ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡು ಕಚೇರಿಯ ವಿವಿಧ ಶಾಖೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದಾಗಿ ಜನರಿಗೆ ವಿವಿಧ ಪ್ರಮಾಣಪತ್ರಗಳು ದೊರೆಯದಂತಾಯಿತು.

ಇದೇ ಕಚೇರಿಯಲ್ಲಿರುವ ಉಪನೋಂದಣಿ ಅಧಿಕಾರಿ ಕಚೇರಿಯಲ್ಲೂ ಜನರು ಕೆಲಸಗಳಾಗದೆ ಪರದಾಡಿದರು. ನೋಂದಣಿಗೆ ಸಂಬಂಧಿಸಿದ ಕೆಲಸಗಳಿಗೆ ಬಂದಿದ್ದ ಜನರು ವಿದ್ಯುತ್ ಇಲ್ಲದ್ದರಿಂದ ಕಚೇರಿಯ ಹೊರಭಾಗದಲ್ಲಿ ಕುಳಿತುಕೊಂಡಿದ್ದರು. ಗುರುವಾರ ಮಧ್ಯಾಹ್ನದ ನಂತರ ವಿದ್ಯುತ್ ಸಮಸ್ಯೆ ಸರಿಪಡಿಸಲಾಯಿತು.