ಬಸವಕಲ್ಯಾಣದಲ್ಲಿ ಕಂದಾಯ ಇಲಾಖೆಯಿಂದ ಲ್ಯಾಪ್‌ಟ್ಯಾಪ್‌ಗಳ ವಿತರಣೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ತಹಸೀಲ್ದಾರ ಡಾ.ದತ್ತಾತ್ರೇಯ ಗಾದಾ, ಡಾ.ರಮೇಶಬಾಬು ಇದ್ದರು. 
ಜಿಲ್ಲೆ

ತಹಸಿಲ್ ಕಚೇರಿ ವ್ಯವಸ್ಥೆ ಸುಧಾರಿಸಲಿ

ರಾಜು ಯಮಕನಮರಡಿ

ಬಸವಕಲ್ಯಾಣ: ತಹಸಿಲ್ ಕಚೇರಿಯಲ್ಲಿ ದುಡ್ಡು ಇಲ್ಲದೆ ಯಾವ ಕೆಲಸ ಆಗಲ್ಲ ಎನ್ನುವ ಜನರ ಆರೋಪ ಸತ್ಯ ಅನಿಸುತ್ತಿದೆ. ಹೀಗೆಂದು ಕ್ಷೇತ್ರದ ಶಾಸಕ ಶರಣು ಸಲಗರ ಅವರೇ ಹೇಳುವ ಮೂಲಕ ಕಂದಾಯ ಇಲಾಖೆ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಪ್ರಸಂಗ ಜರುಗಿತು.

ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್ ವಿತರಣೆಗೂ ಮುನ್ನ ಮಾತನಾಡಿದ ಅವರು, ದುಡ್ಡು ತೆಗೆದುಕೊಂಡು ಕೆಲಸ ಮಾಡುತ್ತಿದ್ದಿರಾ? ರೇಟ್ ಬೋರ್ಡ್ ಹಾಕಿ ಎಂದು ಸ್ವತಃ ಸಚಿವ ಕೃಷ್ಣಭೈರೇಗೌಡ ಅವರೇ ಬೆಂಗಳೂರಿನ ಸಭೆಯೊಂದರಲ್ಲಿ ಹೇಳಿದ್ದಾರೆ. ಇದನ್ನು ಗಮನಿಸಿದರೆ ಜನರ ಆರೋಪ ಸತ್ಯ ಎನಿಸುತ್ತಿದೆ ಎಂದು ಹೇಳಿದರು.

ಇನ್ನು ಮುಂದೆ ಕಚೇರಿಯಲ್ಲಿನ ವ್ಯವಸ್ಥೆ ಸುಧಾರಿಸಿಕೊಳ್ಳಿ, ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಕೇತ್ರದಲ್ಲಿ ಆಯ್ಕೆ ಮಾಡಿದ ಜನರಿಗಾಗಿ ಕಂದಾಯ ಇಲಾಖೆಯಿಂದ ನ್ಯಾಯ ಕೊಡಿಸಬೇಕು ಎನ್ನುವ ಆಸೆ ಇದೆ. ಆದರೆ ತಹಸಿಲ್ ಕಚೇರಿಯಲ್ಲಿ ರೊಕ್ಕಾ ಕೊಡದಿದ್ದರೆ ಕೆಲಸನೇ ಬೇಗ ಆಗಲ್ಲ. ಪ್ರತಿ ಕೆಲಸಕ್ಕೆ ದೊಡ್ಡು ಕೊಡಬೇಕು ಎಂದು ಜನ ಗೋಳಾಡುತ್ತಾರೆ. ಜನ ಹೀಗೇಕೆ ಹೇಳುತ್ತಾರೆ ಎಂದು ವಿಚಾರ ಮಾಡುತ್ತೇನೆ ಎಂದರು.

ಎರಡು ವಾರಗಳ ನಂತರ ಕಂದಾಯ ಇಲಾಖೆ ಸಿಬ್ಬಂದಿ ಸಭೆ ನಡೆಸಲಾಗುವುದು. ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆಯನ್ನು ಪರಿಶೀಲಿಸಲಾಗುವುದು. ಹಿಂದೆ ಏನು ಮಾಡಿದ್ದರಿ ಎಂದು ನಾನು ಕೇಳುವುದಿಲ್ಲ. ಎಲ್ಲರಿಗೆ ಕೈಮುಗಿದು ಮನವಿ ಮಾಡುವೆ. ತಕ್ಷಣ ಸುಧಾರಿಸಿಕೊಳ್ಳಿ, ಕಚೇರಿಗೆ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಯವುದೇ ರೀತಿಯ ಅರೋಪ ಬರದಂತೆ ಕೆಲಸ ಮಾಡಿ. ಮುಂದಿನ ಸಭೆಯ ಒಳಗಾಗಿ ಸುಧಾರಣೆ ಆಗಬೇಕು ಎಂದರು.

ಲ್ಯಾಪ್‌ಟ್ಯಾಪ್ ವಿತರಣೆ: ಕಂದಾಯ ಇಲಾಖೆಯಿಂದ ೩೦ ಲ್ಯಾಪ್‌ಟ್ಯಾಪ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಸಲಗರ ಚಾಲನೆ ನೀಡಿದರು. ಸಹಾಯಕ ಆಯುಕ್ತ ಮುಕುಲ್ ಜೈನ್, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಗ್ರೇಡ್-೨ ತಹಸೀಲ್ದಾರ್ ಡಾ.ರಮೇಶಬಾಬು ಇತರರಿದ್ದರು.