ಹುಬ್ಬಳ್ಳಿ: ಲಾಕ್ಡೌನ್ ನಂತರ ಇದುವರೆಗೆ ನೈಋತ್ಯ ರೈಲ್ವೆ ವಲಯ 209 ವಿಶೇಷ ಶ್ರಮಿಕ ಎಕ್ಸ್ಪ್ರೆಸ್ ರೈಲುಗಳ ಮೂಲಕ ಸುಮಾರು 3 ಲಕ್ಷ ವಲಸೆ ಕಾರ್ವಿುಕರನ್ನು ತವರು ರಾಜ್ಯಗಳಿಗೆ ತಲುಪಿಸಿದೆ.
ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿದ ನಂತರ ಹೆಚ್ಚು ತೊಂದರೆಗೀಡಾದವರು ವಲಸೆ ಕಾರ್ವಿುಕರು. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ ಸೇರಿ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಸಾವಿರಾರು ವಲಸೆ ಕಾರ್ವಿುಕರು ಉದ್ಯೋಗಕ್ಕಾಗಿ ಬಂದಿದ್ದರು. ರಸ್ತೆ ಕಾಮಗಾರಿ, ಕಟ್ಟಡ ನಿರ್ವಣ, ಬೇಕರಿ ವ್ಯಾಪಾರ ಹಾಗೂ ಹಲವು ಕೆಲಸಗಳಲ್ಲಿ ವಲಸೆ ಕಾರ್ವಿುಕರು ನಿರತರಾಗಿದ್ದರು.
ಉನ್ನತ ಶಿಕ್ಷಣಕ್ಕಾಗಿಯೂ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದರು. ಲಾಕ್ಡೌನ್ನಿಂದಾಗಿ ಎಲ್ಲ ಕಾಮಗಾರಿ, ಉದ್ಯೋಗ, ವ್ಯಾಪಾರ, ಶಾಲೆ- ಕಾಲೇಜು, ಹಾಸ್ಟೆಲ್ ಬಂದ್ ಆಗಿದ್ದರಿಂದ ಇವರೆಲ್ಲ ತೊಂದರೆಗೀಡಾದರು. ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಇವರಿಗೆ ಇತ್ತ ಉದ್ಯೋಗವೂ ಇಲ್ಲದೆ, ಮರಳಿ ತವರು ರಾಜ್ಯಕ್ಕೂ ಹೋಗದೆ ತ್ರಿಶಂಕು ಸ್ಥಿತಿಯಲ್ಲಿದ್ದರು.
ಇಂತಹ ಸಂದರ್ಭದಲ್ಲಿ ಶ್ರಮಿಕ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಪ್ರಾರಂಭಿಸಿದ್ದರಿಂದ ಇವರೆಲ್ಲ ತವರು ರಾಜ್ಯ ತಲುಪಲು ಸಹಾಯವಾಯಿತು. ಮೊದಲ 13 ದಿನಗಳಲ್ಲಿ 1 ಲಕ್ಷ ವಲಸೆ ಕಾರ್ವಿುಕರನ್ನು ಹಾಗೂ ಕಳೆದ 6 ದಿನಗಳಲ್ಲಿ 1.90 ಲಕ್ಷ ವಲಸೆ ಕಾರ್ವಿುಕರನ್ನು ಶ್ರಮಿಕ ಎಕ್ಸ್ಪ್ರೆಸ್ ರೈಲುಗಳು ವಿವಿಧ ರಾಜ್ಯಗಳಿಗೆ ತಲುಪಿಸಿದವು. ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೇನ್ಮೆಂಟ್, ಚಿಕ್ಕಬಾನಾವರ, ಮಾಳೂರ, ಮೈಸೂರು, ಕಾಬಕಪುತ್ತೂರ, ಹಾಸನ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಹೊಸೂರುಗಳಿಂದ ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಜಾರ್ಖಂಡ, ಓರಿಸ್ಸಾ, ಪಶ್ಚಿಮ ಬಂಗಾಲ, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಣಿಪುರ, ತ್ರಿಪುರಾ, ಛತ್ತಿಸಗಡ, ಕೇರಳ, ಮಿಜೋರಾಮ್ ನಾಗಾಲ್ಯಾಂಡ್ ರಾಜ್ಯಗಳಿಗೆ ಶ್ರಮಿಕ ಎಕ್ಸ್ಪ್ರೆಸ್ ರೈಲುಗಳು ಸಂಚರಿಸಿವೆ.
ಹೊರ ರಾಜ್ಯಗಳ 178 ಪ್ರಯಾಣಿಕರು ನಗರಕ್ಕೆ ಇಂದು: ಹುಬ್ಬಳ್ಳಿ/ ವಾಸ್ಕೊ ಡ ಗಾಮಾ - ನಿಜಾಮುದ್ದೀನ್ ಲಿಂಕ್ ಎಕ್ಸ್ಪ್ರೆಸ್ ರೈಲಿನ ಮೂಲಕ 178 ಪ್ರಯಾಣಿಕರು ಶುಕ್ರವಾರ ಬೆಳಗ್ಗೆ ಸುಮಾರು 6.30ಕ್ಕೆ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಜೂ. 3ರಂದು ಮಧ್ಯಾಹ್ನ 3 ಗಂಟೆಗೆ ನಿಜಾಮುದ್ದೀನ್ ನಿಲ್ದಾಣದಿಂದ ಹೊರಟಿರುವ ರೈಲು, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೆ ಆಗಮಿಸಲಿದೆ. ನಗರದಲ್ಲಿ ಇಳಿಯುವ ಎಲ್ಲ ಪ್ರಯಾಣಿಕರನ್ನು ಒಂದು ವಾರದವರೆಗೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗುವುದು.
ಧಾರವಾಡ ಜಿಲ್ಲೆಯ ಪ್ರಯಾಣಿಕರನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇರಿಸಲಾಗುವುದು. ಬೇರೆ ಜಿಲ್ಲೆಗಳ ಪ್ರಯಾಣಿಕರನ್ನು ಆಯಾ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಲಾಗುವುದು. ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಕ್ಕಾಗಿ ಸಾರಿಗೆ ಸಂಸ್ಥೆಯ 10ಕ್ಕೂ ಹೆಚ್ಚು ಬಸ್ಗಳನ್ನು ರೈಲ್ವೆ ನಿಲ್ದಾಣದಲ್ಲಿ ಕಾಯ್ದಿರಿಸಲಾಗಿದೆ.