ಜಿಲ್ಲೆ

ತವರು ಜಿಲ್ಲೆಗೆ ಸಿಎಂ ಕೊಡುಗೆ ಭಾಗ್ಯ

ಮಂಜುನಾಥ ತಿಮ್ಮಯ್ಯ ಮೈಸೂರು

ಸಾಂಸ್ಕೃತಿಕ ಜಿಲ್ಲೆ ಮೈಸೂರಿಗೆ ರಾಜ್ಯ ಬಜೆಟ್‌ನಲ್ಲಿ ಯಥೇಚ್ಛವಾಗಿ ಕೊಡುಗೆಗಳ ಭಾಗ್ಯ ದೊರೆತಿವೆ.

16ನೇ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಗೆ ನಿರೀಕ್ಷೆಯಂತೆ ಅನೇಕ ಕಾಣಿಕೆಗಳನ್ನು ಕೊಟ್ಟಿದ್ದು, ಋಣ ತೀರಿಸುವ ಕೆಲಸದೊಂದಿಗೆ ಜಿಲ್ಲೆಯ ಜನರನ್ನು ಸಂತೃಪ್ತಿಗೊಳಿಸಲು ಕಸರತ್ತು ಮಾಡಿದ್ದಾರೆ.

ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕ್ರೀಡೆ, ಸಾರಿಗೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟಿರುವ ಸಿಎಂ, ಮೈಸೂರು ಪ್ರವಾಸೋದ್ಯಮ ಮರೆತಿದ್ದಾರೆ. ಸಿಎಂ ಪ್ರತಿನಿಧಿಸಿರುವ ವರುಣ ಕ್ಷೇತ್ರದ ಮೇಲೆ ಹೆಚ್ಚಿನ ಒಲವು ಮೆರೆದಿದ್ದಾರೆ.

ಮೈಸೂರು ನಗರವಷ್ಟೇ ಅಲ್ಲ, ಗ್ರಾಮಾಂತರ ಪ್ರದೇಶಗಳ ಕಡೆಗೂ ಕಣ್ಣು ಹಾಯಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಉತ್ತಮ ಲಾಭ ಪಡೆದಿದ್ದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ‘ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರ’ ಶುರು ಮಾಡಲು ತೀರ್ಮಾನಿಸಲಾಗಿದೆ.

ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಒಂದು ಅಸ್ವಸ್ಥತೆಯ ಕಾರಣದಿಂದಾಗಿ ಬರುವ ರೋಗವೇ ಎಂಡೋಕ್ರೈನಾಲಜಿ. ಹಾರ್ಮೋನು ಅಸಮಾತೋಲನದಿಂದ ಈ ಸಮಸ್ಯೆ ಎದುರಿಸುತ್ತಿರುವ ಬಹಳಷ್ಟು ಮಹಿಳೆಯರು, ಹೆಣ್ಣು ಮಕ್ಕಳಿಗೆ ಈ ಕೇಂದ್ರದಿಂದ ಅನುಕೂಲವಾಗಲಿದೆ.

ಜತೆಗೆ, ಮೈಸೂರು ವೈದ್ಯಕೀಯ ಕಾಲೇಜಿನಲ್ಲೇ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಸ್ಥಾಪನೆಗೆ ಮುಂದಾಗಿದ್ದು, ಇದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗುವುದು ಈ ಉಪಕ್ರಮದಿಂದ ತಪ್ಪಲಿದೆ.

‘ಫಿಲ್ಮ್ ಸಿಟಿ’ ಮತ್ತೆ ಪ್ರಸ್ತಾಪ:

ಮುಂದಿನ ವರ್ಷದಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಬದ್ಧ ಎಂದಿರುವ ಸಿಎಂ, ಪಿಪಿಪಿ ಮಾದರಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ವಿಷಯ ಹಿಂದಿನ ಅನೇಕ ಬಜೆಟ್‌ನಲ್ಲೂ ಪ್ರಸ್ತಾಪವಾಗಿದ್ದರೂ, ಈವರೆಗೆ ಪ್ರಗತಿ ಕಂಡಿಲ್ಲ.

ಸೋಮನಾಥಪುರದಲ್ಲಿ ಮೂಲಸೌಲಭ್ಯ ಅಭಿವೃದ್ಧಿ:

ಯುನೆಸ್ಕೋ ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ತಿ.ನರಸೀಪುರ ತಾಲೂಕಿನ ಸೋಮನಾಥಪುರ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಕೊನೆಗೂ ಕ್ರಮ ವಹಿಸಲಾಗಿದ್ದು, ಇದರಿಂದ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗುವ ಮೂಲಕ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು ಅನುವು ಆಗಲಿದೆ.

ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಯನ್ನು ಬಿಂಬಿಸುವ ರಾಜ್ಯ ಮಟ್ಟದ ವಸ್ತುಸಂಗ್ರಹಾಲಯವನ್ನು ಮೈಸೂರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಕೈಗಾರಿಕೆ ಕ್ಷೇತ್ರಕ್ಕೂ ಕೊಡುಗೆ

ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಮೈಸೂರಿನ 150 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ‘ಪ್ರಿಂಟೆಂಡ್ ಸರ್ಕೀಟ್ ಬೋರ್ಡ್ ಪಾರ್ಕ್’ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಲಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯದಲ್ಲಿ ಕರ್ನಾಟಕದ ನಾಯಕತ್ವವನ್ನು ಬಲಪಡಿಸಲು ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ ಅನ್ನು ಸಹ ನಗರದಲ್ಲಿ ಅಭಿವೃದ್ಧಿ ಪಡಿಸಲಾಗುವುದು.

ಜತೆಗೆ, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂಬ ಭರವಸೆಯನ್ನು ಕೊಡಲಾಗಿದೆ. ಇದರಿಂದ ಮೈಸೂರು ಕೈಗಾರಿಕಾ ಬೆಳವಣಿಗೆಗೆ ವೇಗ ಕೊಡಲು ಸಿಎಂ ಮುಂದಾಗಿದ್ದಾರೆ.

ರನ್‌ವೇ ವಿಸ್ತರಣೆಗೆ ಸಹಾಯಹಸ್ತ:

ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ಭೂ ಸ್ವಾಧೀನಕ್ಕಾಗಿ 319 ಕೋಟಿ ರೂ. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಅನುವಾಗುವಂತೆ ಕೆಐಎಡಿಬಿ ವಶಪಡಿಸಿಕೊಂಡಿರುವ ಜಮೀನುಗಳನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದು, ಇದು ವಿಮಾನನಿಲ್ದಾಣದ ಉನ್ನತೀಕರಣಕ್ಕೆ ನೆರವಾಗಲಿದೆ.

ರೇಷ್ಮೆಗೂಡಿನ ಮಾರುಕಟ್ಟೆ

ಈ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲು ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಯನ್ನು ನಬಾರ್ಡ್ ಸಹಯೋಗದಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಹೈಟೆಕ್ ‘ಮತ್ಸ್ಯ ದರ್ಶಿನಿ’:

ಪ್ರವಾಸಿಗರಿಗೆ ಶುಚಿ-ರುಚಿಯಾದ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈಟೆಕ್ ‘ಮತ್ಸ್ಯ ದರ್ಶಿನಿ’ಯನ್ನು ಪ್ರಾರಂಭಿಸಲಾಗುವುದು ಎಂಬ ಆಶ್ವಾಸನೆಯನ್ನೂ ಕೊಟ್ಟಿದ್ದಾರೆ.

ಕ್ರೀಡಾ ಕೇಂದ್ರ, ಕುಸ್ತಿ ಅಕಾಡೆಮಿ:

ಮೈಸೂರಿನಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ತೆರೆಯುತ್ತಿದ್ದು, ಇದಕ್ಕಾಗಿ 7 ಕೋಟಿ ರೂ. ಕಾಯ್ದಿಡಲಾಗಿದೆ. ಜತೆಗೆ, ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿಗಳನ್ನು ಸ್ಥಾಪಿಸಲು 2 ಕೋಟಿ ರೂ. ಒದಗಿಸಲಾ ಗುವುದು ಎಂದು ಘೋಷಿಸಲಾಗಿದೆ. ಮೈಸೂರಿನಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು 5 ಕೋಟಿ ರೂ. ನೀಡಲಾಗವುದು. ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಇವುಗಳ ನಿರ್ವಹಣೆಯನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಗ್ನಿಶಾಮಕ ಠಾಣೆಗೆ ಹೊಸ ಕಟ್ಟಡ:

ಮೈಸೂರು ನಗರದ ವ್ಯಾಪ್ತಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹೊಸ ಅಗ್ನಿ ಶಾಮಕ ಠಾಣಾ ಕಟ್ಟಡವನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಸರಸ್ವತಿಪುರಂನಲ್ಲಿ ಅಗ್ನಿಶಾಮಕ ಠಾಣೆ ಇದ್ದ ಪಾರಂಪರಿಕ ಕಟ್ಟಡ ಕೆಲ ವರ್ಷಗಳ ಹಿಂದೆ ಕುಸಿದು ಬಿದ್ದಿದೆ. ಉಳಿದ ಭಾಗವೂ ಶಿಥಿಲಗೊಂಡಿದೆ. ಹೀಗಾಗಿ, ಹೊಸ ಕಟ್ಟಡ ಅವಶ್ಯಕವಾಗಿತ್ತು. ಜತೆಗೆ, ಪೊಲೀಸ್ ಇಲಾಖೆ ಬಲವರ್ಧನೆಗಾಗಿ ಮೈಸೂರಿನಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯದಳ ಸ್ಥಾಪಿಸಲಾಗುತ್ತಿದೆ.

ಆಧುನಿಕ ಬಸ್ ನಿಲ್ದಾಣ:

ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ತಲೆಯೆತ್ತಲಿದೆ. ಇದಕ್ಕಾಗಿ 120 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದರೊಂದಿಗೆ ಬಹುದಿನದ ಬೇಡಿಕೆ ಈಡೇರಿಕೆಗೆ ಮೊದಲ ಹೆಜ್ಜೆ ಇಡಲಾಗಿದೆ. ಈ ಕ್ರಮದಿಂದ ಈಗಿರುವ ಗ್ರಾಮಾಂತರ ಬಸ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಿ ಸಾರ್ವಜನಿಕರಿಗೂ ಪ್ರಯೋಜನವಾಗಲಿದೆ.

ತಾಳೆಗರಿಗೆ ಡಿಜಿಟಲ್ ಸ್ಪರ್ಶ:

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದಾಗಿ ಹಸ್ತಪ್ರತಿಗಳು ಡಿಜಿಟಲ್ ರೂಪ ಪಡೆದುಕೊಳ್ಳಲಿವೆ. ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ ಕಾಯ್ದಿಡಲಾಗಿದೆ.

ಬುಡಕಟ್ಟು ಮ್ಯೂಸಿಯಂ:

ನಗರದ ಹೊರವಲಯದ ದಟ್ಟಗಳ್ಳಿಯಲ್ಲಿರುವ ಬುಡಕಟ್ಟು ಸಂಶೋಧನಾ ಕೇಂದ್ರದ ಆವರಣದಲ್ಲಿ ‘ಬುಡಕಟ್ಟು ವಸ್ತುಸಂಗ್ರಹಾಲಯ’ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ರಾಜ್ಯ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ.

ಇತ್ತೀಚಿನ ಎಚ್.ಡಿ.ಕೋಟೆ ತಾಲೂಕಿನ ಹಾಡಿಗಳಿಗೆ ಭೇಟಿ ನೀಡಿ ಬುಡಕಟ್ಟು ಜನರೊಂದಿಗೆ ಸಂವಾದ ಮಾಡುವ ಸಂದರ್ಭದಲ್ಲಿ ಸಿಎಂ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಇದೀಗ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಜತೆಗೆ, ಬುಡಕಟ್ಟು ಸಮುದಾಯದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಿರುವ 5 ಬುಡಕಟ್ಟು ವಸತಿ ಶಾಲೆಗಳನ್ನು 12ನೇ ತರಗತಿವರೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಆಯವ್ಯಯದಲ್ಲಿ ತಿಳಿಸಲಾಗಿದೆ.

ಸರಗೂರು, ಸಾಲಿಗ್ರಾಮದಲ್ಲಿ ಪ್ರಜಾಸೌಧ:

ಕಬಿನಿ ನದಿ ಹಾಗೂ ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತದೆ. ಜಿಲ್ಲೆಯ ಹೊಸ ತಾಲೂಕುಗಳಾದ ಸರಗೂರು ಮತ್ತು ಸಾಲಿಗ್ರಾಮದಲ್ಲಿ ತಾಲೂಕು ಆಡಳಿತಕ್ಕಾಗಿ ಪ್ರಜಾಸೌಧ ನಿರ್ಮಿಸಲಾಗುತ್ತದೆ.

ಗುರುವಿನ ಸ್ಮರಣೆ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಮೈಸೂರು ವಿವಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಇದರೊಂದಿಗೆ ತಮ್ಮ ಸೈದ್ಧಾಂತಿಕ, ರಾಜಕೀಯ ಗುರುವಿನ ಕುರಿತು ಅಧ್ಯಯನ, ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವ ಮೂಲಕ ಸ್ಮರಿಸಿಕೊಂಡಿದ್ದಾರೆ.

ಸ್ವಕ್ಷೇತ್ರ ವರುಣಕ್ಕೆ ಅನೇಕ ಉಡುಗೊರೆ

ವರುಣದಲ್ಲಿ ಜಿಟಿಟಿಸಿ ಬಹು ಕೌಶಲಾಭಿವೃದ್ಧಿ ಕೇಂದ್ರವು ಪ್ರಸಕ್ತ ಸಾಲಿನಿಂದಲೇ ಕಾರ್ಯಾರಂಭವಾಗಲಿದ್ದು, ಇದಕ್ಕೆ ನಬಾರ್ಡ್ ಸಹಯೋಗ ನೀಡಲಿದ್ದು, 60 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ. ನಂಜನಗೂಡು ತಾಲೂಕಿನ ತಗಡೂರು ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ತಿ.ನರಸೀಪುರ ತಾಲೂಕು ಕ್ರೀಡಾಂಗಣಕ್ಕೆ 6 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಪಾರಂಪರಿಕ ಕಟ್ಟಡ ಸಂರಕ್ಷಣೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಸಂಜೆ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ, ಕೈಗಾರಿಕಾ ಪ್ರಾಧಿಕಾರ, ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ, ಮೈಸೂರು ಹೊರಭಾಗದಲ್ಲಿ ಹೊರವರ್ತುಲ ರಸ್ತೆ ಟೌನ್ ಪ್ಲಾೃನಿಂಗ್ ಯೋಜನೆಗೆ (ಪೆರಿಫೆರಲ್ ರಿಂಗ್ ರಸ್ತೆ)... ಹೀಗೆ ವಿವಿಧ ಬೇಡಿಕೆಗಳಿಗೆ ಸಿಎಂ ಅವರಿಂದ ಬಜೆಟ್‌ನಲ್ಲಿ ಸ್ಪಂದನೆ ದೊರೆತಿಲ್ಲ.