ಜಿಲ್ಲೆ

ತವರಿಗೆ ಮರಳಿದವರಿಗೆ ನೆರವಾದ ನರೇಗಾ

Gadag

ನರಗುಂದ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕೂಲಿ ಕಾರ್ವಿುಕರು ಇದೀಗ ತಮ್ಮ ಗ್ರಾಮಗಳತ್ತ ಮರಳುತ್ತಿದ್ದು, ಅಂಥವರಿಗೆ ಆಯಾ ಗ್ರಾಪಂ ವ್ಯಾಪ್ತಿಯಲ್ಲೇ ನರೇಗಾ ಯೋಜನೆಯ ಕೆಲಸವನ್ನು ನೀಡಲು ತಾಲೂಕಾಡಳಿತದ ಅಧಿಕಾರಿಗಳು ಮುಂದಾಗಿದ್ದಾರೆ.

ನರಗುಂದ ತಾಲೂಕಿನ 13 ಗ್ರಾಮ ಪಂಚಾಯತಿ ವ್ಯಾಪ್ತಿಯ ಒಟ್ಟು 30 ಗ್ರಾಮಗಳಲ್ಲಿ ಈಗಾಗಲೇ ನರೇಗಾ ಕಾಮಗಾರಿಗಳನ್ನು ಆರಂಭಿಸಲಾಗಿದೆ. 2020-21 ನೇ ಸಾಲಿನಲ್ಲಿ ಒಟ್ಟು 635 ಕುಟುಂಬಗಳ 1275 ಜನ ಕೂಲಿ ಕಾರ್ವಿುಕರು ಕೆಲಸದಲ್ಲಿ ನಿರತರಾಗಿದ್ದಾರೆ. ಇಲ್ಲಿಯವರೆಗೆ 3215 ಮಾನವ ದಿನ ಸೃಜನೆಯಾಗಿವೆ. ಮೇ ಅಂತ್ಯದವರೆಗೆ ಒಟ್ಟು 6000 ಮಾನವ ದಿನಗಳನ್ನು ಸೃಜಿಸುವ ಗುರಿಯನ್ನು ತಾಪಂ ಅಧಿಕಾರಿಗಳು ಹೊಂದಿದ್ದಾರೆ.

ಅಲ್ಲದೆ, ಕರೊನಾ ಮುಂಜಾಗ್ರತಾ ಕ್ರಮವಾಗಿ ಕೈ ತೊಳೆಯಲು ಸಾಬೂನು, ಸ್ಯಾನಿಟೈಸರ್, ಕುಡಿಯಲು ನೀರಿನ ವ್ಯವಸ್ಥೆ ಹಾಗೂ ಕಾರ್ವಿುಕರ ಮಕ್ಕಳ ಪಾಲನೆಗೆ ವಿವಿಧ ಕ್ರಮ ಕೈಗೊಳ್ಳಲಾಗಿದೆ. ಕಾರ್ವಿುಕರು ಅನಾರೋಗ್ಯಕ್ಕೆ ಒಳಗಾದಲ್ಲಿ ಹತ್ತಿರದ ಪ್ರಾಥಮಿಕ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಕಾಮಗಾರಿಗಳು: ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳ 50 ಎಕರೆ ಜಮೀನಿನಲ್ಲಿ ಪ್ರಸಕ್ತ ಮುಂಗಾರು ಅವಧಿಗೆ ಬದುವುಗಳ ನಿರ್ವಣ, ಕೃಷಿ ಅರಣ್ಯೀಕರಣದ ಮೂಲಕ ಗಿಡಗಳನ್ನು ನೆಡಲು ಮುಂಗಡವಾಗಿ ಹದ್ಲಿ-ಸುರಕೋಡ ಒಳ ರಸ್ತೆಯಲ್ಲಿ 3 ಕಿಮೀ ಹಾಗೂ ನರಗುಂದ-ಸುರಕೋಡ ಒಳ ರಸ್ತೆಯ 3 ಕಿಮೀ ವ್ಯಾಪ್ತಿಯಲ್ಲಿ ತಲಾ 900 ಗುಂಡಿ ತೆಗೆಯುವುದು, 10 ಕೃಷಿ ಹೊಂಡಗಳ ನಿರ್ವಣ, 130 ದನದ ಕೊಟ್ಟಿಗೆಯ ನಿರ್ವಣ, ತೋಟಗಾರಿಕೆ ಕ್ಷೇತ್ರ ವಿಸ್ತರಣೆಗಾಗಿ 150 ಎಕರೆ ವಿಸ್ತೀರ್ಣದಲ್ಲಿ ಪೇರಲ ಸಸಿಗಳನ್ನು ನೆಡುವುದು, ರಸ್ತೆಬದಿ ಗಿಡ ನೆಡಲು ಗುಂಡಿ, ಮಳೆ ನೀರು ಕೊಯ್ಲು ನಿರ್ವಣಕ್ಕೆ ಕಾರ್ಯಾದೇಶ ನೀಡಲಾಗಿದೆ.

ಕಾರ್ವಿುಕರಿಗೆ ಪ್ರತಿಜ್ಞೆ: ಕೆಲಸಕ್ಕೂ ಮುನ್ನ ಕೂಲಿ ಕಾರ್ವಿುಕರಿಗೆ ಪ್ರತಿನಿತ್ಯ ‘ನಾವು ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ವ್ಯಕ್ತಿಗಳ ನಡುವೆ ಕನಿಷ್ಠ 3 ಅಡಿ ಅಂತರವನ್ನು ಕಾಯ್ದುಕೊಳ್ಳುತ್ತೇವೆ. 5 ಕ್ಕಿಂತ ಹೆಚ್ಚು ಜನರು ಸೇರಿ ಕೆಲಸ ನಿರ್ವಹಿಸುವುದಿಲ್ಲ’ ಎಂಬಿತ್ಯಾದಿ ಪ್ರತಿಜ್ಞೆ ಮಾಡಿಸಲಾಗುತ್ತದೆ.

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ನರಗುಂದ ತಾಲೂಕಿನ ಎಲ್ಲ 13 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿ ಈಗಾಗಲೇ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಕಾರ್ವಿುಕರಿಗೆ ದಿನವೊಂದಕ್ಕೆ 10 ರೂ. ಸಲಕರಣೆ ಬಾಬ್ತು ಸೇರಿ ಒಟ್ಟು 285 ರೂ. ಸಂಬಳ ಪಾವತಿಸಲಾಗುವುದು. ಕಾಮಗಾರಿಯಲ್ಲಿ ತೊಡಗುವ ಕೂಲಿ ಕಾರ್ವಿುಕರಿಗೆ ಮಾಸ್ಕ್​ಗಳನ್ನು ನೀಡಿ ಸ್ಥಳದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ವಿುಕರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ನಿರ್ವಹಿಸಬೇಕು. ಚಂದ್ರಶೇಖರ ಕುರ್ತಕೋಟಿ, ನರಗುಂದ ತಾ.ಪಂ. ಇಒ