ಜಿಲ್ಲೆ

ತವರಿಗೆ ಬಂದ ವೈದ್ಯ ವಿದ್ಯಾರ್ಥಿ

Bidar

ಬೀದರ್: ಉಕ್ರೇನ್ ದೇಶದಲ್ಲಿ ಕಿಡಿಗೇಡಿಗಳಿಂದ ಅಪಹರಣಕ್ಕೀಡಾಗಿ ಸಂಕಷ್ಟಕ್ಕೆ ಸಿಲುಕಿದ್ದ ಔರಾದ್ ತಾಲೂಕಿನ ಹುಲ್ಯಾಳ ಥಾಂಡಾದ ವೈದ್ಯ ವಿದ್ಯಾರ್ಥಿ ಅಜಯಕುಮಾರ ರಾಠೋಡ್ ಶುಕ್ರವಾರ ಸುರಕ್ಷಿತವಾಗಿ ತವರಿಗೆ ಮರಳಿದ್ದಾನೆ.

ವಿದ್ಯಾರ್ಥಿ ಅಪಹರಣ ವಿಷಯ ತಿಳಿಯುತ್ತಲೇ ಸಂಸದ ಭಗವಂತ ಅವರು ವಿದೇಶಾಂಗ ಸಚಿವಾಲಯ, ರಾಯಭಾರಿ ಕಚೇರಿ ಮತ್ತು ಉಕ್ರೇನ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಅಗತ್ಯ ಕ್ರಮ ಕೈಗೊಂಡರು. ಈ ಕ್ರಮದ ಪರಿಣಾಮ ವಿದ್ಯಾರ್ಥಿ ಬೇಗ ಮತ್ತು ಸುರಕ್ಷಿತ ಸ್ವಗ್ರಾಮಕ್ಕೆ ಬರಲು ಸಾಧ್ಯವಾಗಿದೆ.

ವಿದ್ಯಾರ್ಥಿ ತಾಯಿ ಶೋಭಾ, ತಂದೆ ರಾಮರಾವ, ಸಂಬಂಧಿಗಳಾದ ಪ್ರದೀಪ, ಕಾಶಿನಾಥ ಜಾಧವ ಇತರರು ಅಜಯಕುಮಾರ ಜತೆಗೂಡಿ ಸಂಸದ ಭಗವಂತ ಖೂಬಾ ಅವರಿಗೆ ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.

ಅಪಹರಣದ ಸುದ್ದಿ ಕೇಳಿ ಆತಂಕವಾಗಿತ್ತು. ವಿದೇಶದಲ್ಲಿ ಏನಾಗುತ್ತದೋ ಎಂಬ ಭಯ ಕಾಡಿತ್ತು. ಆದರೆ ಸಂಸದರು ಸಾಕಷ್ಟು ಶ್ರಮ ವಹಿಸಿ ಮಗ ವಾಪಸ್ ಬರುವಂತೆ ಮಾಡಿದ್ದಾರೆ ಎಂದು ತಾಯಿ ಶೋಭಾ ಕೃತಜ್ಞತೆ ಅರ್ಪಿಸಿ ಭಾವುಕರಾದರು. ಈ ವೇಳೆ ಮಾತನಾಡಿದ ಸಂಸದ ಖೂಬಾ ಅವರು, ವಿದ್ಯಾರ್ಥಿಗೆ ಬರುವ ವರ್ಷ ಕಲಬುರಗಿಯಲ್ಲಿ ವೈದ್ಯ ಪ್ರವೇಶ ಕಲ್ಪಿಸಿಕೊಡುವ ಭರವಸೆ ನೀಡಿದರು.