ಬಾಗಲಕೋಟೆ: ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರೂರಿಗೆ ಬಂದ ಸೈನಿಕ ಭೀಮಪ್ಪ ನಿಂಗಪ್ಪ ಕಿಚಡಿ ಅವರಿಗೆ ನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರೈಲ್ವೆ ಮೂಲಕ ನಗರಕ್ಕೆ ಆಗಮಿಸಿದಾಗ ರೈಲ್ವೆ ನಿಲ್ದಾಣದಲ್ಲಿ ಹೂ ಮಾಲೆ ಹಾಕಿ ಯುವಕರು ಸ್ವಾಗತಿಸಿದರು. ನಂತರ ಬೈಕ್ ರ್ಯಾಲಿ ಮೂಲಕ ಮೆರವಣಿಗೆಯಲ್ಲಿ ಎಂ.ಜಿ.ರಸ್ತೆ, ಪೊಲೀಸ್ ಚೌಕ, ಪಂಕಾ ಮಸೀದಿ, ಗಜಾನನ ಚೌಕ ಮಾರ್ಗವಾಗಿ ಹಳಪೇಟ ಮಡುವಿನ ರೇಣುಕಾಯಲ್ಲಮ್ಮ ದೇವಸ್ಥಾನದವರೆಗೆ ಕರೆ ತರಲಾಯಿತು. ನಂತರ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭೀಮಪ್ಪ ಕಿಚಡಿ ಮಾತನಾಡಿ, 21 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿದಕ್ಕೆ ಹೆಮ್ಮೆ ಇದೆ. ಪ್ರತಿಯೊಬ್ಬ ಯುವಕರು ದೇಶದ ಸುರಕ್ಷತೆ ಹಾಗೂ ಸೇವೆಗೆ ಮುಂದಾಗಬೇಕು. ದೇಶ ಸುರಕ್ಷತೆಯಿದ್ದರೆ ನಾವೆಲ್ಲ ಸುರಕ್ಷಿತರಿರುತ್ತವೆ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಮನೆಯಲ್ಲಿ ಹಿರಿಯರು ಯುವಕರ ದುಶ್ಚಟಗಳನ್ನು ಬಿಡಿಸಿ ದೇಶಾಭಿಮಾನ ಮೂಡಿಸುವ ಮೂಲಕ ದೇಶ ರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸಪ್ಪ ಯಳ್ಳಿಗುತ್ತಿ, ವೀರುಪಾಕ್ಷಪ್ಪ ಏಳಮ್ಮಿ, ಸಂಗಪ್ಪ ಸಜ್ಜನ, ಮಂಜುನಾಥ ಏಳೆಮ್ಮಿ, ಸುರೇಶ ಮಜ್ಜಗಿ, ಈರಣ್ಣ ಹೊನ್ನಳ್ಳಿ, ಮಹಾಂತೇಶ ಗಿರಿಗಾಂವಿ,ಪ್ರಭಾವತಿ ಗಣಾಚಾರಿ, ಶಶಿಕಲಾ ಮಜ್ಜಗಿ, ಅಮಾತೆಪ್ಪ ಮಂಕಣಿ,ರಾಜು ನಾಯ್ಕ, ರೇಣುಕಾ ಬಡಿಗೇರ ಇದ್ದರು.
ಬಾಗಲಕೋಟೆ ನಗರಕ್ಕೆ ಆಗಮಿಸಿದ ಸೈನಿಕ ಭೀಮಪ್ಪ ನಿಂಗಪ್ಪ ಕಿಚಡಿ ಅವರಿಗೆ ನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.