ಹೊಳೆನರಸೀಪುರ: ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಸರ್ವರ್ ಸಮಸ್ಯೆ ತಲೆನೋವಾಗಿ ಪರಿಣಮಿಸಿದ್ದು ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ಫಲಾನುಭವಿಗಳು ತಮ್ಮ ಹೆಸರು ತಿದ್ದುಪಡಿ ಸೇರ್ಪಡೆಗೆ ಆ. 18ರಿಂದ 21ರವರೆಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಸರ್ವರ್ ಸಮಸ್ಯೆ ನಾಗರಿಕರನ್ನು ಕಂಗಾಲಾಗಿಸಿದೆ.
ಕುಟುಂಬದ ಸದಸ್ಯರು ಮರಣ ಹೊಂದಿದಲ್ಲಿ ಹೆಸರು ಕೈಬಿಡುವುದು, ಮಕ್ಕಳ ಸೇರ್ಪಡೆ, ಯಜಮಾನಿ ಸೇರ್ಪಡೆ, ಕುಟುಂಬದ ಇತರ ಸದಸ್ಯರ ಸೇರ್ಪಡೆ ಇತ್ಯಾದಿ ಸಮಸ್ಯೆಗಳನ್ನು ಪಡಿತರ ಚೀಟಿಯಲ್ಲಿ ಸರಿಪಡಿಸಲು ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಮುಂಜಾನೆಯೇ ಕೆಲಸ ಕಾರ್ಯಗಳನ್ನು ಬಿಟ್ಟು ಸೈಬರ್ ಸೆಂಟರ್ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಕೆಲಸ ಆಗದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ವರ್ ಸಮಸ್ಯೆ ಪಡಿತರ ಚೀಟಿದಾರವನ್ನು ಪೆಡಂಭೂತವಾಗಿ ಕಾಡುತ್ತಿದೆ. ವೃದ್ಧರು, ಗರ್ಭಿಣಿಯರು, ಬಾಣಂತಿಯರು ಮತ್ತು ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಊಟ, ತಿಂಡಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೃಷಿ ಚಟುವಟಿಕೆ ಹಾಗೂ ಕೆಲಸ ಕಾರ್ಯಗಳನ್ನು ಬಿಟ್ಟು ಕಾದು ಕುಳಿತರೂ ಕೆಲಸವಾಗುತ್ತಿಲ್ಲ. ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಹಾತೋರೆಯುತ್ತಿರುವ ನಾಗರಿಕರಿಗೆ ಸರ್ವರ್ ಸಮಸ್ಯೆ ಅಡ್ಡಗಾಲಾಗಿದೆ. ಒಂದು ಸೈಬರ್ ಸೆಂಟರ್‌ನಲ್ಲಿ ದಿನಕ್ಕೆ ಒಂದೆರಡು ತಿದ್ದುಪಡಿಗಳ ಕೆಲಸ ಮಾತ್ರ ಆಗುತ್ತಿದೆ. ಇದರಿಂದ ಸೈಬರ್ ಸೆಂಟರ್‌ನವರು ಕೂಡ ಸಾರ್ವಜನಿಕರಿಗೆ ಸಮಸ್ಯೆ ಪದೇ ಪದೆ ತಿಳಿಸಿ ಹೈರಾಣಾಗಿದ್ದಾರೆ.
ಪಡಿತರ ಚೀಟಿಯಲ್ಲಿ ಫಲಾನುಭವಿಗಳ ಹೆಸರು ತಿದ್ದುಪಡಿ ಸೇರ್ಪಡೆಗೆ ಸರ್ಕಾರ ನೀಡಿರುವ ಗಡುವನ್ನು ವಿಸ್ತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.