ಜಿಲ್ಲೆ

ತಲುಪದ ಮತದಾರರ ಮಾಹಿತಿ ಚೀಟಿ

Chitradurga - Desk - Pranav Kumar

ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಮತದಾರರ ಮಾಹಿತಿ ಚೀಟಿ (ವೋಟರ್ ಇನ್‌ಫಾರ್‌ಮೇಶನ್ ಸ್ಲಿಪ್) ತಲುಪದ ಕಾರಣ ತಮ್ಮ ಮತಗಟ್ಟೆ ಕೇಂದ್ರದ ಬಳಿ ಕ್ರಮ ಸಂಖ್ಯೆ ಹುಡುಕಲು ಶುಕ್ರವಾರ ಅನೇಕ ಮತದಾರರು ಗಂಟೆಗಟ್ಟಲೇ ಪರದಾಡುವಂತಾಯಿತು.

ಮತ ಚೀಟಿ ತಲುಪದ ಕಾರಣ ಬೆಳಗ್ಗೆ 11ಕ್ಕೆ ಮತ ಚಲಾಯಿಸಲು ಬಂದ ಕೆಲವರು, ಮಧ್ಯಾಹ್ನ 1ಗಂಟೆಯಾದರೂ ಕ್ರಮಸಂಖ್ಯೆ ಸಿಗದಿದ್ದರಿಂದಾಗಿ ಬೇಸರದಿಂದ ಹಿಂದಿರುಗಲು ಮುಂದಾದರು.

ಈ ವೇಳೆ ಬಿಎಲ್‌ಒಗಳು ಮೊಬೈಲ್ ಆ್ಯಪ್ ಬಳಸಿ ವೋಟರ್ ಐಡಿ ಸಹಾಯದಿಂದ ಕ್ರಮಸಂಖ್ಯೆ ಹುಡುಕಿ ಮತ ಚಲಾಯಿಸುವಂತೆ ಮನವಿ ಮಾಡಿದ ಪ್ರಸಂಗವೂ ಕೆಲವೆಡೆ ಕಂಡು ಬಂತು.

ಲೋಕಸಭೆ, ವಿಧಾನಸಭೆ ಸೇರಿ ಯಾವುದೇ ಚುನಾವಣೆಯಾಗಲಿ ಮತದಾನಕ್ಕೂ ಒಂದು ವಾರ ಮುನ್ನ ಮತದಾರರ ಮಾಹಿತಿ ಚೀಟಿ ಮನೆ-ಮನೆಗೆ ತಲುಪುತ್ತಿತ್ತು. ಈ ಬಾರಿ ಕೆಲವೆಡೆ ವಿತರಿಸಿದ್ದರೆ, ಇನ್ನೂ ಕೆಲವೆಡೆ ವಿತರಣೆಯಾಗಿಲ್ಲ. ಹೀಗಾಗಿ ಎಲ್ಲರಿಗೂ ತಲುಪಿಲ್ಲ ಎಂದು ಕೆಲ ಮತದಾರರು ಬಿಎಲ್‌ಒಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಮತದಾನ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಸಿಬ್ಬಂದಿ ವೈದ್ಯರ ತಪಾಸಣೆಗೆ ಟೋಕನ್ ನೀಡುವ ಮಾದರಿಯಲ್ಲಿ ಸಣ್ಣ ಚೀಟಿಯೊಳಗೆ ಕ್ರಮಸಂಖ್ಯೆ ಬರೆದು ಮತದಾರರನ್ನು ಮತಗಟ್ಟೆ ಬಳಿ ಕಳಿಸುತ್ತಿದ್ದ ದೃಶ್ಯವೂ ಕೆಲವೆಡೆ ಕಂಡು ಬಂದಿತು.

ಮತಗಟ್ಟೆ ವ್ಯಾಪ್ತಿ ನಮಗೆ ಹೊಸದು. ಅಲ್ಲದೆ, ಅನೇಕರ ಮನೆಗಳ ವಿಳಾಸ ಗೊತ್ತಿಲ್ಲ. ಎರಡ್ಮೂರು ಬಾರಿ ಹೋದರೂ ಕೆಲವು ಬಾಗಿಲು ಹಾಕಿದ್ದವು. ಹೀಗಾಗಿ ಎಂಟತ್ತು ದಿನಗಳಿಂದ ನಿಗದಿತ ದೇಗುಲಗಳ ಬಳಿ ವಿತರಿಸಿದ್ದೇವೆ. ತಲುಪದವರಿಗೂ ಕ್ರಮಸಂಖ್ಯೆ ಬರೆದುಕೊಟ್ಟು ಮತ ಚಲಾಯಿಸಲು ಅವಕಾಶ ನೀಡಿದ್ದೇವೆ ಎನ್ನುತ್ತಾರೆ ಬಿಎಲ್‌ಒಗಳು.