ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆ ಬಣಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರು ಸಮೀಪ ಚನ್ನಪಟ್ಟಣದ ನಾಲ್ವರ ನೊಂದ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿರುವ ಹಂಪಯ್ಯ (62), ಪ್ರೇಮಾ (58), ಮಂಜಯ್ಯ (60), ಪ್ರಭಾಕರ್(40) ಅವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಧರ್ಮಸ್ಥಳದಿಂದ ಗ್ರಾಮಕ್ಕೆ ಹಿಂತಿರುಗುವ ವೇಳೆ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದವರ ಚಿಕಿತ್ಸೆಗೆ ಹಾಗೂ ಮೃತರ ಪಾರ್ಥಿವ ಶರೀರಗಳನ್ನು ಕುಟುಂಬದವರಿಗೆ ಒಪ್ಪಿಸಲು ಚಿಕ್ಕಮಗಳೂರಿನ ಜಿಲ್ಲಾಡಳಿತವನ್ನು ಚಿತ್ರದುರ್ಗದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಂಪರ್ಕಿಸಿದ್ದರು.