ಜಿಲ್ಲೆ

ತಲಕಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಲಿ: ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಆಗ್ರಹ

ಮೈಸೂರು: ರಾಜ್ಯ ಸರ್ಕಾರವು ತಲಕಾಡು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಆಗ್ರಹಿಸಿದರು.

ಶ್ರೀ ಪುರುಷ ಸಾಂಸ್ಕೃತಿಕ ಸಮಿತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತಲಕಾಡು ಗಂಗರ ಇತಿಹಾಸ ಮತ್ತು 5ನೇ ವರ್ಷದ ಶ್ರೀ ಪುರುಷೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು

.

ಶಾಲಾ ಪಠ್ಯದಲ್ಲಿ ಗಂಗರ ಬಗ್ಗೆ ನಾಲ್ಕು ಸಾಲು ಓದಿದನ್ನು ಬಿಟ್ಟರೆ ತೀರಾ ಇತ್ತೀಚಿನವರೆಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿಯೇ ಇರಲಿಲ್ಲ.

ಕನ್ನಡದ ಮೊದಲ ರಾಜರಾದ ಗಂಗರು ನೂರಾರು ವರ್ಷಗಳ ಕಾಲ ಕನ್ನಡ ನಾಡನ್ನು ಆಳಿದ್ದಾರೆ. ನಾವು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಶ್ರೀ ಮಹದೇಶ್ವರರ ಉತ್ಸವ ಆಯೋಜಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕರೆಸಿ, ಮಹದೇಶ್ವರಬೆಟ್ಟ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿದ್ದವು.

ನಂತರ ಅದು ಕಾರ್ಯಗತವಾಯಿತು. ಅದೇ ರೀತಿ ತಲಕಾಡು ಅಭಿವೃದ್ಧಿ ಬಗ್ಗೆಯು ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.

ತಲಕಾಡು ಗಂಗರ ಬಗ್ಗೆ ಉಪನ್ಯಾಸ ನೀಡಿದ ಇತಿಹಾಸಕಾರ ಡಾ.ತಲಕಾಡು ಚಿಕ್ಕರಂಗೇಗೌಡ, ಇಡೀ ದೇಶದಲ್ಲೇ ಸತತ 654 ವರ್ಷಗಳ ಸುದೀರ್ಘ ಕಾಲ ರಾಜ್ಯಭಾರ ಮಾಡಿದ ಏಕೈಕ ರಾಜಮನೆತನ ಗಂಗರದು. ಇಂತಹ ಗಂಗರನ್ನು 10ನೇ ಶತಮಾನದಲ್ಲಿ ಕಳೆದುಕೊಂಡು 21ನೇ ಶತಮಾನದಲ್ಲಿ ಹುಡುಕುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಗಂಗರ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಬೃಹತ್ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಇದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೋರಿದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಬರಲು ನಾವು ಕಾರಣ. ಆದರೆ, ಪ್ರಚಾರ ಬೇಡ ಎಂದು ಬೇರೆಯವರು ಪ್ರಚಾರ ಪಡೆದುಕೊಂಡರು. ನಮ್ಮ ಸಂಶೋಧನೆಯ ವಿಷಯದಲ್ಲೂ ಕೆಲವರು ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾವು ಇಂತಹ ಸವಾಲುಗಳನ್ನು ಎದುರಿಸಿಯೇ ಮುಂದೆ ಸಾಗಬೇಕಾಗಿದೆ ಎಂದರು.

ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಮಹದೇಶ್ವರ ಬೆಟ್ಟ, ಚಾಮುಂಡಿಬೆಟ್ಟದಂತೆ ತಲಕಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡಬೇಕು ಎಂದು ಆಗ್ರಹಿಸಿದರು.

ಶ್ರೀ ಪುರುಷ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಈ ಪ್ರಶಸ್ತಿ ಬಹಳ ವಿಶಿಷ್ಠವಾದುದು. ಶ್ರೀಪುರುಷನ ಹೆಸರಿನ ಮೊದಲ ಪ್ರಶಸ್ತಿಯನ್ನು ನನಗೆ ನೀಡುತ್ತಿರುವುದಕ್ಕೆ ಸಂತೋಷವಾಗಿದೆ. ಪ್ರಶಸ್ತಿಯೇ ಹೆಸರೇ ಶ್ರೀಪುರುಷ ಎಂದಿರುವುದರಿಂದ ಇದನ್ನು ಮಹಿಳೆಯರಿಗೆ ಕೊಡಲಾಗದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಗೌಡತಿಯರ ಸೇನೆಯ ಅಧ್ಯಕ್ಷೆ ರೇಣುಕಾ ಬಿ. ಭಕ್ತರಹಳ್ಳಿ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹವ್ಯಾಸಿ ಇತಿಹಾಸಕ ಡಾ.ಬಿ.ಎನ್. ರವೀಶ್ ಇನ್ನಿತರರಿದ್ದರು.