ಹುಣಸೂರು: ತಂಬಾಕು ಮಾರುಕಟ್ಟೆಯಲ್ಲಿ ಈವರೆಗೆ ತರಗು ತಂಬಾಕು ಖರೀದಿಗೆ ಕಂಪನಿಗಳು ಮುಂದಾಗದಿರುವುದು ರೈತರಲ್ಲಿ ಆತಂಕ ಉಂಟು ಮಾಡಿದ್ದು, ತಂಬಾಕು ಮಂಡಳಿ ಶೀಘ್ರ ಸಭೆ ನಡೆಸಿ ಈ ಕುರಿತು ಕ್ರಮವಹಿಸಬೇಕೆಂದು ತಂಬಾಕು ಹರಾಜು ಮಂಡಳಿ ಸದಸ್ಯ ವಿಕ್ರಂ ರಾಜೇಗೌಡ ಆಗ್ರಹಿಸಿದ್ದಾರೆ.
ಪ್ರಸಕ್ತ ಸಾಲಿನ ತಂಬಾಕು ಮಾರುಕಟ್ಟೆ ಆರಂಭಗೊಂಡು ತಿಂಗಳು ಸಮೀಪಿಸುತ್ತಿದ್ದರೂ, ತರಗು ತಂಬಾಕು ಖರೀದಿಸಲು ಕಂಪನಿಗಳು ಮುಂದೆ ಬರುತ್ತಿಲ್ಲ. ಈಗಾಗಲೇ ಉತ್ತಮ ಗುಣಮಟ್ಟದ ತಂಬಾಕಿನ ದರ ದಿಢೀರ್ ಕುಸಿತ ಕಂಡಿದ್ದು, ಇದೀಗ ತರಗು ತಂಬಾಕನ್ನು ಕಡೆಗಣಿಸುತ್ತಿರುವುದು ರೈತರನ್ನು ಬಾಣಲೆಯಿಂದ ಬೆಂಕಿಗೆ ದೂಡಿದಂತಾಗಿದೆ ಎಂದು ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ತರಗು ತಂಬಾಕನ್ನು ಕೆಜಿಗೆ 200ರೂ.ಗಳಿಂದ 230ಕ್ಕಿ ಖರೀದಿ ಮಾಡಲಾಗಿದೆ. ಇಲ್ಲಿ ಮಾತ್ರ ಖರೀದಿಯನ್ನೇ ಮಾಡುತ್ತಿಲ್ಲ. ಈನಡುವೆ ಆಂಧ್ರಪ್ರದೇಶದಲ್ಲಿ ನಿಗದಿತ ಪ್ರಮಾಣ 148 ಮಿಲಿಯನ್ ಕೆಜಿಗಿಂತ ಹೆಚ್ಚಿನ ಪ್ರಮಾಣದಲ್ಲಿ(78 ಮಿಲಿಯನ್ ಕೆಜಿ ಹೆಚ್ಚುವರಿ)ರೈತರು ತಂಬಾಕು ಬೆಳೆದಿದ್ದು, ಕಂಪನಿಗಳು ತಂಬಾಕು ದಾಸ್ತಾನು ಮಾಡಿಕೊಂಡು ಮಾರಾಟಕ್ಕಾಗಿ ಕಾಯುತ್ತಿದ್ದಾರೆ.
ಹಾಗಾಗಿ ಕರ್ನಾಟಕದ ತಂಬಾಕಿಗೆ ಬೆಲೆ ಸಿಗುತ್ತಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬೆಳೆಯಲು ಅವಕಾಶ ನೀಡಿರುವುದು ಸರಿಯಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಮಂಡಳಿಯ ನೂತನ ನಿರ್ದೇಶಕ ಬಿ.ಸಿ.ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ್ದು, ಶೀಘ್ರ ಮಾರುಕಟ್ಟೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.