ಕೊಟ್ಟೂರು: ಕುಟುಂಬದಲ್ಲಿ ಆರೋಗ್ಯದ ಕಾಳಜಿಯಿರುವ ಮಹಿಳೆ ಇದ್ದಲ್ಲಿ, ಆ ಕುಟುಂಬದ ಸದಸ್ಯರು ಉತ್ತಮ ಆರೋಗ್ಯ ಹೊಂದಬಹುದು ಎಂದು ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಎಂ.ಶಬೀನಾ ಹೇಳಿದರು.
ಸುಟ್ಟಕೋಡಿಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ಆಯೋಜಿಸಿದ್ದ ಗ್ರಾಮ ಆರೋಗ್ಯ ಪೌಷ್ಟಿಕಾಂಶ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ತರಕಾರಿ, ಸೊಪ್ಪು, ಏಕದಳ, ದ್ವಿದಳ ಧಾನ್ಯ, ಹಾಲು, ಮೊಸರು, ತುಪ್ಪ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಕೊಳ್ಳಬೇಕು. ಆರೋಗ್ಯ ಸಂಕ್ಷಣಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಬಂದಾಗ ಗರ್ಭಿಣಿಯರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಹೆಚ್ಚು ತರಕಾರಿ ಸೇವನೆಯಿಂದ ರಕ್ತಹೀನತೆಯಿಂದ ದೂರವಿರಬಹುದು ಎಂದರು.
ಸಮುದಾಯ ಆರೋಗ್ಯಾಧಿಕಾರಿ ಬಿ.ಎಸ್.ಶೋಭಾ, ಗ್ರಾಮೀಣ ಪ್ರದೇಶದಲ್ಲೂ ಮಾನಸಿಕ ಒತ್ತಡ, ರಾಸಾಯನಿಕ ಗೊಬ್ಬರ ಬಳಸಿದ ಆಹಾರ, ಅಶುದ್ದ ಪರಿಸರದಿಂದ ರಕ್ತದೊತ್ತಡ, ಮಧುಮೇಹ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗದೆ, ಪೌಷ್ಟಿಕಾಂಶ ಆಹಾರ ಸೇವನೆ, ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಸದಾ ಉಲ್ಲಾಸದಿಂದ ಇರುವ ಮೂಲಕ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಿಸಿಕೊಳ್ಳಬಹುದು ಎಂದರು.
ಆಶಾ ಕಾರ್ಯಕರ್ತೆಯರಾದ ಬಿ.ಸುಶೀಲಾ, ಎಂ.ಸಿ.ಭಾರತಿ, ಕೆ.ಲಲಿತಾ ಗರ್ಭಿಣಿಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಎಚ್.ಶೋಭಾ ಪ್ರಾರ್ಥಿಸಿದರು. ಆಶಾ ಕಾರ್ಯಕರ್ತೆ ಎಂ.ಸಿ.ಭಾರತಿ ಸ್ವಾಗತಿಸಿದರು.