ಬೆಳಗಾವಿ :
ಕ್ಯಾಬೀಜ್, ಟೊಮೊಟೊ ಸೇರಿದಂತೆ ಹಲವು ತರಕಾರಿಗಳ ಬೆಲೆ ಪಾತಾಳಕ್ಕೆ ಕುಸಿದಿದ್ದು, ತೋಟಗಾರಿಗೆ ಬೆಳೆ ಬೆಳೆದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡಿಸಿದ ರೈತ ಸಂಘದ ಪದಾಧಿಕಾರಿಗಳು, ಕಾಯಿಪಲ್ಯ ಬೆಳೆಯುವುದು ಇಂದು ಆರ್ಥಿಕ ಸವಾಲಿನ ಕೆಲಸವಾಗಿದ್ದು, ನಷ್ಟ ಅನುಭವಿಸಲು ಶಕ್ಯರಿರುವವರು ಮಾತ್ರ ತರಕಾರಿ ಬೆಳೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಇನ್ನು ಹವಾಮಾನ, ರೋಗ ಹಾಗೂ ಕಳಪೆ ಬೀಜಗಳಿಂದಲೂ ಇಳುವರಿ ಕುಂಠಿತಗೊಳ್ಳುವುದು ಸಾಮಾನ್ಯವಾಗಿದ್ದು, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಸಮೀಕ್ಷೆ ನಡೆಸಬೇಕು. ಬೆಳೆ ಹಾನಿ ಸಮೀಕ್ಷೆಯಲ್ಲಿ ನಿವಾಗಿಯೂ ಹಾನಿಗೊಳಗಾದ ಜಿಲ್ಲೆಯ ಬಹುತೇಕ ರೈತರಿಗೆ ಇಂದಿಗೂ ಪರಿಹಾರ ಲಭಿಸಿಲ್ಲ. ಸೋಯಾಬಿನ್ ಸೇರಿದಂತೆ ಹಲವು ತೋಟಗಾರಿಗೆ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಸಮರ್ಪಕವಾಗಿ ಸಕಾಲದಲ್ಲಿ ವಿತರಿಸುವಂತೆ ಸರ್ಕಾರ ಜಿಲ್ಲಾಮಟ್ಟದ ಹಾಗೂ ತಾಲೂಕು, ಹೋಬಳಿಗಳಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಅಪ್ಪಾಸಾಬ ದೇಸಾಯಿ, ಫಕೀರ ಸದಾವರ, ಸುಭಾಷ ದಾಯಗೊಂಡ, ನಾಮದೇವ ದುಡಂ, ಮಾರುತಿ ಕಡೇಮನಿ, ಸಾದೇವ ಬೆಳಗಾಂವಕರ್, ಶಿವಾಜಿ ಬುರ್ಲಿ ಹಾಗೂ ರಾಜು ಕಾಗಣಿಕರ ಸೇರಿದಂತೆ ಇತರರಿದ್ದರು.