ಜಿಲ್ಲೆ

ತಮ್ಮನ ಕೊಂದ ಅಣ್ಣನಿಗೆ ಶಿಕ್ಷೆ

ಹಾಸನ: ಮಾರಾಣಾಂತಿಕ ಹಲ್ಲೆ ನಡೆಸಿ ತಮ್ಮನನ್ನು ಕೊಲೆ ಮಾಡಿದ್ದ ಅಣ್ಣನಿಗೆ 5 ವರ್ಷ ಕಠಿಣ ಸಜೆ ಹಾಗೂ 20 ಸಾವಿರ ದಂಡ ವಿಧಿಸಿ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅರಕಲಗೂಡು ತಾಲೂಕಿನ ಕರೀಂ ಶಿಕ್ಷೆಗೆ ಒಳಗಾದ ಅಪರಾಧಿ. ಈತ 2017, ಫೆಬ್ರವರಿ 12 ರಂದು ತನ್ನ ಮನೆ ಹಿಂದಿನ ರೋಜಾ ಮುಳ್ಳಿನ ಬೇಲಿ ಕಡಿಯುತ್ತಿದ್ದುದನ್ನು ಪ್ರಶ್ನಿಸಿದ ಕಿರಿಯ ಸಹೋದರ ಅಬ್ದುಲ್ ದಸ್ತಗೀರ್ ಜತೆ ಜಗಳ ಮಾಡಿ ಕುಡುಗೋಲಿನಿಂದ ಸಹೋದರನ ಮೇಲೆ ಮಾರಣಾಂತಿಮ ಹಲ್ಲೆ ನಡೆಸಿದ್ದ.
ದಸ್ತಗೀರ್ ಅವರ ಎಡಭಾಗದ ಎದೆಗೆ ಕುಡುಗೋಲಿನ ಏಟು ಬಿದ್ದಿದ್ದರಿಂದ ಗಂಭೀರ ಗಾಯಗಳಾಗಿದ್ದವು. ಗಾಯಾಳುವಿಗೆ ಕೊಣನೂರು, ಅರಕಲಗೂಡು ನಂತರ ಹಾಸನದ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಮನೆಯಲ್ಲಿಯೇ ಶುಶ್ರೂಷೆಯಲ್ಲಿದ್ದ ದಸ್ತಗೀರ್ ಗಾಯ ವಾಸಿಯಾಗದೆ ಮೃತಪಟ್ಟಿದ್ದರು.
ಈ ಸಂಬಂಧ ಐಪಿಸಿ ಕಲಂ 143, 147, 148, 323, 504, 302 ರೆ/ವಿ 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಕೊಣನೂರು ಠಾಣೆ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರೀಂಗೆ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸರ್ಕಾರಿ ಅಭಿಯೋಜಕರು) ಕೆ.ಎಸ್. ನಾಗೇಂದ್ರ ವಾದ ಮಂಡಿಸಿದ್ದರು.