ಬಾಗಲಕೋಟೆ: ಇತಿಹಾಸದ ಪುಟದಲ್ಲಿ ಅನೇಕ ನೋವು, ಸಂಕಟ ದೇಶಕ್ಕೆ ಬಂದಿದೆ. ಆದರೇ ಸ್ವಾತಂತ್ರ‍್ಯ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಹರಣ ಮಾಡಿ ಪ್ರಜೆಗಳ ಹಕ್ಕುಗಳನ್ನು ಮೊಟಕುಗೊಳಿಸಿದ ಕರಾಳ ನೆನಪು ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ಚಿಂತಕ ಚಕ್ರವರ್ತಿ ಸೂಲೆಬೆಲೆ ಹೇಳಿದರು.
ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕವು ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ ೫೦ ವರ್ಷ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.
ತುರ್ತು ಪರಿಸ್ಥಿತಿ ವೇಳೆ ಪತ್ರಿಕಾ ಸ್ವಾತಂತ್ರ‍್ಯ, ವಾಕ್ ಸ್ವಾತಂತ್ರ‍್ಯ, ಪ್ರಜೆಗಳ ಹಕ್ಕು ಕಸಿದುಕೊಳ್ಳಲಾಯಿತು. ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ಉದ್ದೇಶಿತ ಆಶಯಕ್ಕೆ ಧಕ್ಕೆ ತಂದರು. ತಮ್ಮ ಸ್ವಾರ್ಥಕ್ಕಾಗಿ ದೇಶದ ಇತಿಹಾಸದಲ್ಲಿಯೇ ಕರಾಳವಾದ ಅಧ್ಯಾಯ ನಿರ್ಮಾಣ ಮಾಡಿದರು. ಇದಕ್ಕೆ ಇಂಧಿರಾ ಗಾಂಧಿ ದುರಾಡಳಿತ, ಸಂಜಯ ಗಾಂಽಯ ದುರಾಸೆ ಕಾರಣ ಎಂದು ಟೀಕಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಬದಲಾಯಿಸಿದರು. ದೇಶದಲ್ಲಿಯೇ ಅತೀ ಹೆಚ್ಚು ಭಾರಿ ಸಂವಿಧಾನ ತಿದ್ದುಪಡಿ ತಂದವರು ಕಾಂಗ್ರೆಸ್ ಕಾಲವಾಧಿಯಲ್ಲಿ ಎನ್ನುವುದು ಅಂಕಿ, ಸಂಖ್ಯೆಗಳೇ ಹೇಳುತ್ತವೆ. ನೆಹರು ಎಡ್ವರ್ಸ ಜಲಿಂಗ್ಸ ಎನ್ನುವ ಬ್ರಿಟಿಷ ವ್ಯಕ್ತಿಗೆ ಸಂವಿಧಾನ ರಚಿಸಲು ಹೇಳಿದ್ದರು. ಆದರೇ ಮಹಾತ್ಮ ಗಾಂಧೀಜಿ ತೀವ್ರ ವಿರೋಧ ಮಾಡಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಒಳಗೊಂಡ ತಂಡ ರಚಿಸಿ ಸಂವಿಧಾನ ಕರಡು ರಚನಾ ಸಮಿತಿ ಅಸ್ತಿತ್ವಕ್ಕೆ ತಂದರು. ನೆಹರು ೧೬, ಇಂಽರಾ ಗಾಂಽ ೩೨, ರಾಜೀವ ಗಾಂಽ ೧೦ ಸೇರಿ ಕಾಂಗ್ರೆಸ್ ಒಟ್ಟು ೫೮ ಸಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ವಾಜಪೇಯಿ ೧೧, ಮೋದಿ ೮ ಸಾರಿ ತಿದ್ದು ಪಡಿ ಮಾಡಿದ್ದಾರೆ. ಆದರೇ ಸಂವಿಧಾನ ಬದಲಾಯಿಸುತ್ತಾರೇ ಅಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಆರೋಪಿಸುತ್ತಾರೆ. ಇದರ ಹಿಂದಿನ ಸತ್ಯ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ವೇಳೆ ಅಕ್ರಮವಾಗಿ ಚುನಾವಣೆ ನಡೆದಿತ್ತು. ರಾಯಬರೇಲಿ ಕ್ಷೇತ್ರದಿಂದ ಗೆದ್ದಿದ್ದ ಇಂದಿರಾಗಾಂಧಿ ಆಯ್ಕೆ ಅಸಿಂಧುಗೊಳಿಸಿ ಅಲಹಬಾದ್ ಹೈಕೋರ್ಟ ತೀರ್ಪು ನೀಡಿ ೬ ವರ್ಷಗಳ ಚುನಾವಣೆಗೆ ನಿಲ್ಲುವ ಅವಕಾಶ ಬಂದ ಮಾಡಿತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಇಂದಿರಾ ಗಾಂಽ ದಿಕ್ಕು ತೋಚದಂತಾಗಿದ್ದರು. ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿದ್ದಾರ್ಥ ಶಂಕರ ರೇ ತುರ್ತು ಪರಿಸ್ಥಿತಿ ಕುರಿತು ಸಲಹೆ ನೀಡಿದ. ಅದರ ಪರಿಣಾಮ ಜೂ.೨೫ ೧೯೭೫ ರಂದು ತುರ್ತು ಪರಿಸ್ಥಿತಿ ಇಂದಿರಾ ಗಾಂಧಿ ಘೋಷಿಸಿದರು. ಇದಕ್ಕೆ ಅಂದಿನ ರಾಷ್ಟ್ರ
ಪತಿ ಫಕ್ರುದ್ದೀನ್ ಅಲಿ ಒಪ್ಪಿರಲಿಲ್ಲ. ರಾತ್ರೋ ರಾತ್ರಿ ಅವರ ಒಪ್ಪಿಗೆ ಪಡೆದು ಜಾರಿಗೊಳಿಸಲಾಯಿತು ಎಂದು ಹೇಳಿದರು.
ಇದಕ್ಕೆ ಸೆಡ್ಡು ಹೊಡೆದ ಜಯಪ್ರಕಾಶ ನಾರಾಯಣ ಆಂದೋಲನ ಆರಂಭಿಸಿದರು. ದೇಶವ್ಯಾಪಿ ಬಹುದೊಡ್ಡ ಬೆಂಬಲ ದೊರೆಯಿತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇಶದ ಪ್ರಜೆಗಳು ಸೇರಿ ಇಂದಿರಾ ಗಾಂಧಿ
ನಡೆ ವಿರೋಧಿಸಿದರು. ಕರ್ನಾಟಕದಲ್ಲಿಯೂ ಚಳುವಳಿಗಳು ನಡೆದವು. ಅನೇಕರು ಜೈಲು ಸೇರಿದರು, ಪೊಲೀಸರ ಲಾಠಿ ರುಚಿ ತಿಂದರು. ಜೀವ ಕಳೆದುಕೊಂಡರು. ನಿಜಕ್ಕೂ ಭಾರತದ ಇತಿಹಾಸದಲ್ಲಿಯೇ ಇದು ಕರಾಳ ಅಧ್ಯಾಯ. ಯುವ ಮಿತ್ರರರು ಇದನೆಲ್ಲ ಅವಲೋಕನಮಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ನಾವೆಲ್ಲ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿ ಬಂದಿದ್ದೇವೆ. ದಿ.ಜ್ಯೋತಿ ಪ್ರಕಾಶ ಸಾಳುಂಕೆ ನೇತೃತ್ವದಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಆಂದೋಲನ ನಡೆದಿತ್ತು. ಪರಿಸ್ಥಿತಿ ಬಹಳಷ್ಟು ಬಿಗಡಾಯಿಸಿತ್ತು ಎಂದು ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿಸಿದರು.
ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ಸಂಚಾಲಕ ಮಹೇಂದ್ರ ಕವಿತಾಳ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಜಿ.ಪಟ್ಟಣಶೆಟ್ಟಿ ಇದ್ದರು. ನಾಗಪ್ಪ ಅಂಬಿ ಸ್ವಾಗತಿಸಿದರು.