ಜಿಲ್ಲೆ

ತಮ್ಮ ಪಕ್ಷದ ಶಾಸಕರಿಂದಲೇ ಕಾಂಗ್ರೆಸ್ ಸರ್ಕಾರ ಪತನ: ಬಿ.ವೈ. ವಿಜಯೇಂದ್ರ ಭವಿಷ್ಯ

Hassan - Ramesh H R

ಹಾಸನ: ಕಾಂಗ್ರೆಸ್ ಜನ ವಿರೋಧಿ ಸರ್ಕಾರವನ್ನು ಎಂದೂ ನೋಡಿರಲಿಲ್ಲ. ಲಜ್ಜೆಗೆಟ್ಟ, ಹಿಂದುಗಳ ವಿರೋಧಿ, ಬಡವರ ವಿರೋಧಿ ಸರ್ಕಾರ ಕಿತ್ತೊಗೆಯಬೇಕು. ಈ ಸರ್ಕಾರ ಬೀಳಿಸಲು ಯಾರೂ ಬೇಕಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಸಾಕು ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.

ನಗರದಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ನಗರದ ಹಳೇ ತಹಸೀಲ್ದಾರ್ ಕಚೇರಿ ಬಳಿಯಿಂದ ಪಾದಯಾತ್ರೆ ಮೂಲಕ ಹೊರಟ ಪ್ರತಿಭಟನಾ ಮೆರವಣಿಯು ಮಹಾವೀರ ವೃತ್ತಕ್ಕೆ ಬಂದು ತಲುಪಿತು. ಬಳಿಕ ಬಹಿರಂಗ ಭಾಷಣದಲ್ಲಿ ಮಾತನಾಡಿದ ಅವರು, ಐವತ್ತಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಈ ಸರ್ಕಾರದ ಬುಡಸಮೇತ ಕಿತ್ತು ಹಾಕಲು ನಮ್ಮ ಜನಾಕ್ರೋಶ ಯಾತ್ರೆ ಹೊರಟಿದೆ. ರಾಜ್ಯದಲ್ಲಿ ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಮೀಸಲಾತಿ, ಮುಲ್ಲಾಗಳಿಗೆ ಸಂಬಳ ಜಾಸ್ತಿ, ಹಿಂದು ಅರ್ಚಕರ ಸಂಬಳ ಹೆಚ್ಚು ಇಲ್ಲ. ಎಸ್‌ಸಿ, ಎಸ್ಟಿ ಮೀಸಲು 38 ಸಾವಿರ ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದಾರೆ. ಯಾವುದೇ ಚುನಾವಣೆ ಇಲ್ಲದಿದ್ದರೂ ಬಿಜೆಪಿ ಹೋರಾಟ ಮಾಡುತ್ತಾ ಇದೆ. ಇದು ವಿಪಕ್ಷವಾಗಿ ನಮ್ಮ ಜವಾಬ್ದಾರಿ ಎಂದರು.

ಬೆಂಗಳೂರಿನಲ್ಲಿ ಕೇಳಿದರು ಆಪರೇಷನ್ ಕಮಲ ಮಾಡ್ತಾ ಇದಿರಾ ಅಂತಾ. ಅದಕ್ಕೆ ನಾನು ಹೇಳಿದೆ ನಾವು ಇನ್ನೂ ಮೂರು ವರ್ಷ ವಿಪಕ್ಷದಲ್ಲಿ ಇರುತ್ತೇವೆ ಅಂತಾ! ಆದರೆ ಕಾಂಗ್ರೆಸ್ ಶಾಸಕರೇ ಈ ಸರ್ಕಾರ ಸರಿ ಇಲ್ಲ ಅಂತಾ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ನಿಂತು ಹೋಗಿದೆ. ಬಡವರ ವಿರೋದಿ ಈ ಸರ್ಕಾರ ಇದ್ದರೂ ಸತ್ತಂತೆ. ಜನರ ಹಣ ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ. ಇಂತಹ ದರಿದ್ರ ಸರ್ಕಾರ ನೋಡಿಯೇ ಇಲ್ಲ ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳುತ್ತಾರೆ. ಈ ಸರ್ಕಾರ ಅನುದಾನ ನೀಡುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನಿಸುತ್ತಿದೆ ಎಂದು ಅವರ ಪಕ್ಷದ ಶಾಸಕ ರಾಜು ಕಾಗೆ ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಹಾಲು, ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದ್ದು, ಇಂತಹ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡಬೇಕಿದೆ ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬೆಲೆ ಏರಿಕೆ ಬಿಸಿಯಿಂದ ಜನರು ಚೀ, ಥೂ ಎನ್ನುತ್ತಿದ್ದಾರೆ. ಗ್ಯಾರಂಟಿಗೆ ಬೇಕಿರುವುದು 60 ಸಾವಿರ ಕೋಟಿ ರೂ., ಇವರು ತೆರಿಗೆ ಹಾಕಿರೋದು 80 ಸಾವಿರ ಕೋಟಿ ರೂ. ಇಂತಹ ಭ್ರಷ್ಟ, ಮೋಸದ ಸರ್ಕಾರವನ್ನು ರಾಜ್ಯ ಈ ಹಿಂದೆ ನೋಡಿರಲಿಲ್ಲ. ಡಿ.ಕೆ. ಶಿವಕುಮಾರ್ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಅಂದರು. ಟೋಪಿಗಳಿಗೋಸ್ಕರ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತಾರೆ. ಈ ದೇಶ ಯಾರದ್ದು? ಹಿಂದುಗಳು ಇರುವ ಭಾರತವನ್ನು ಇನ್ನೊಂದು ಪಾಕಿಸ್ತಾನ ಮಾಡಬೇಕಾ? ಮುಸಲ್ಮಾನ್‌ರಿಗೆ ಕಲರ್, ಕಲರ್, ರೇಷ್ಮೆ ಟೋಪಿ ಹಾಕಿ ಮಜಾ ಮಾಡಿ ಅಂಥಾವ್ರೆ ಎಂದು ಹೇಳಿದರು.

ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮಾತನಾಡಿ. ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಜನರಿಗೆ ಸಂದೇಶ ಕೊಡಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಜತೆಗೆ ಮುಸ್ಲಿಂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. 9 ರೂ. ಹಾಲಿನ ದರ ಏರಿಕೆ ಮಾಡಿ 4 ರೂ. ಮಾತ್ರ ರೈತರಿಗೆ ಕೊಡುತ್ತಿದ್ದಾರೆ. ಈಗ ಸದ್ಯ ಯಾವುದೇ ಚುನಾವಣೆ ಇಲ್ಲ. ಇದು ಚುನಾವಣೆ ಪ್ರಚಾರ ಅಲ್ಲ ರಾಜ್ಯದಲ್ಲಿ ಚುನಾವಣೆ ಇನ್ನೂ ಮೂರು ವರ್ಷ ಇದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಗ್ರಾಮಗಳಿಗೆ ಕಾಂಗ್ರೆಸ್ ಪಕ್ಷದ ನೂನ್ಯತೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚಾಗಿದೆ. ರೈತರ ಆತ್ಮಹತ್ಯೆ ಈ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿದೆ. ಇದೆಲ್ಲಾ ನೋಡಿದರೆ ಜನ ಸುಖವಾಗಿ ಇದ್ದಾರೆ ಎಂದು ಭಾವಿಸವೇಕಾ? ಹಾಲಿನ ದರ ಮಾತ್ರವಲ್ಲ ಆಲ್ಕೊ ಹಾಲ್ ದರ ಕೂಡ ಏರಿಕೆ ಆಗಿದೆ. ಹೆಂಗಸರಿಗೆ ಫ್ರೀ, ಗಂಡನ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಈ ಸರ್ಕಾರ ಮಾಡ್ತಾ ಇದೆ. ಇದು ಪಿಕ್ ಪಾಕೆಟ್ ಅಲ್ಲ. ಹಗಲು ದರೋಡೆ ಎಂದು ಗುಡುಗಿದರು.

ಯಾತ್ರೆಯಲ್ಲಿ ಶಾಸಕರಾದ ಎಚ್.ಕೆ. ಸುರೇಶ್, ಸಿಮೆಂಟ್ ಮಂಜು, ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಯೋಗೇಶ್, ಪ್ರೀತಿ ವರ್ಧನ್, ಎಚ್.ಎನ್. ನಾಗೇಶ್ ಇತರರು ಉಪಸ್ಥಿತರಿದ್ದರು.