ಜಿಲ್ಲೆ

ತಮಿಳು ಮಕ್ಕಳ ಕನ್ನಡ ಪ್ರೀತಿ

Kolar

ಕೆ.ಆರ್.ಚಂದ್ರಶೇಖರ್, ಲಕ್ಕೂರು
ಮಾಲೂರು ತಾಲೂಕಿನ ಗಡಿಭಾಗದಲ್ಲಿರುವ ಹೊಸಮನೆಗಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮಿಳುನಾಡಿನ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಇದು ಎರಡು ರಾಜ್ಯಗಳ ಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ದಿನ್ನಹಳ್ಳಿ ಗ್ರಾಪಂನ ಹೊಸಮನೆಗಳು ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳು ಓದುತ್ತಿದ್ದು ಇದರಲ್ಲಿ ನೆರೆಯ ತಮಿಳನಾಡಿನ ಹಳ್ಳಿಯಿಂದ 5 ವಿದ್ಯಾರ್ಥಿಗಳು ಕನ್ನಡ ಶಾಲೆಗೆ ಸೇರಿದ್ದಾರೆ.
ತಮಿಳುನಾಡಿನ ಹೊಸೂರು ತಾಲೂಕಿನ ಚಾಪರವಲ್ಲಿಯ ಐವರು ವಿದ್ಯಾರ್ಥಿಗಳು ಬರುತ್ತಿದ್ದು, 1 ನೇ ತರಗತಿಯಲ್ಲಿ ಜಿ. ಕುಮಾರ್, 2ನೇ ತರಗತಿಯಲ್ಲಿ ಶಂಕರನ್ ಹಾಗೂ ಪ್ರಜ್ವಲ್, 3ನೇ ತರಗತಿಯಲ್ಲಿ ನಿತಿನ್, 5ನೇ ತರಗತಿಯಲ್ಲಿ ದೀಪಾ ಕಲಿಯುತ್ತಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಕಲಿತಿದ್ದಾರೆ. ಚಾಪರವಲ್ಲಿಯಲ್ಲಿ ಶಾಲೆ ಇಲ್ಲ ಎಂದಲ್ಲ, ಅಲ್ಲಿಯೂ ತಮಿಳು ಶಾಲೆಯಿದ್ದರೂ ಕನ್ನಡ ಭಾಷೆಯನ್ನು ಕಲಿಯಬೇಕೆನ್ನುವ ಹಂಬಲದಿಂದ ಈ ಶಾಲೆಗೆ ಬರುತ್ತಿದ್ದಾರೆ.
ತಮಿಳುನಾಡು ರಾಜ್ಯದ ವಿದ್ಯಾರ್ಥಿಗಳು ಕನ್ನಡದ ಮಕ್ಕಳೊಡನೆ ಉತ್ತಮ ಬಾಂಧವ್ಯ ಹೊಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಭೇದ ಭಾವವಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ಕ್ಷಿತ್ಯನಾರಾಯಣ.

ಹೊರ ರಾಜ್ಯದ ಗಡಿ ಗ್ರಾಮಗಳಿಂದ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಹೀಗಿರುವಾಗ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ಹಾಗಾಗಿ ಮಕ್ಕಳಿಗೆ ಬೇಕಾದ ಸೌಲಭ್ಯ ನೀಡಲಾಗುತ್ತಿದೆ.

ಚಂದ್ರಕಲಾ, ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ

ತಮಿಳುನಾಡಿನ ಗಡಿ ಭಾಗದ ಗ್ರಾಮದಿಂದ ನಮ್ಮ ಕನ್ನಡ ಶಾಲೆಗೆ ಮಕ್ಕಳು ಬಂದು ಕನ್ನಡದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ಇಂಥ ಸಮಯದಲ್ಲಿ ಶಾಲೆಗೆ ಮೂಲಸೌಲಭ್ಯ ನೀಡಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ.

ಉಮಾ ಜಲಂದರ್, ಗ್ರಾಪಂ ಅಧ್ಯಕ್ಷೆ ದಿನ್ನಹಳ್ಳಿ