ಹಾಸನ: ಗರ್ಭಿಣಿಯ ಪ್ರಸವ ಪೂರ್ವ ಸ್ಕಾೃನಿಂಗ್ ವರದಿಯನ್ನು ತಪ್ಪಾಗಿ ನೀಡಿದ್ದಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೆಡಿಯೊಲಾಜಿಸ್ಟ್‌ಗೆ 30 ಲಕ್ಷ ರೂ. ದಂಡ ವಿಧಿಸಿ ಜೂ.11ರಂದು ಆದೇಶ ನೀಡಿದೆ.
ಆಲೂರು ತಾಲೂಕಿನ ಹಳ್ಳಿಕೊಪ್ಪಲು ಗ್ರಾಮದ ಬಿ.ಆರ್.ಪವಿತ್ರಾ ಅವರು ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಪ್ರಸವ ಪೂರ್ವ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸವ ಪೂರ್ವ ಅನೋಮಲಿ ಸ್ಕಾೃನಿಂಗ್ ಮಾಡಿಸುವಂತೆ ಆಸ್ಪತ್ರೆಯ ವೈದ್ಯೆ ಡಾ.ಪ್ರತಿಮಾ ಆದರ್ಶ್ ಅವರು ಸೂಚಿಸಿದ್ದರು. ಅದರಂತೆ ನಗರದ ಕೆ.ಆರ್.ಪುರಂನಲ್ಲಿರುವ ರೆಡಿಯೊಲಾಜಿಸ್ಟ್ ಡಾ.ಕೆ.ವಿ.ಸುಜಾತಾ ಅವರ ಬಳಿ ಪವಿತ್ರಾ ಅವರು ಸ್ಕಾೃನಿಂಗ್ ಮಾಡಿಸಿದ್ದರು. 2023ರ ಮಾರ್ಚ್ 15ರಂದು ನೀಡಿದ ಸ್ಕಾೃನಿಂಗ್ ವರದಿಯಲ್ಲಿ ಮಗುವಿಗೆ ಸೀಳು ತುಟಿ ಇರುವುದಿಲ್ಲ. ಕಣ್ಣು ಮತ್ತು ಮೂಗು ಸರಿಯಿರುತ್ತದೆ ಎಂದು ತಿಳಿಸಲಾಗಿತ್ತು.
ಆದರೆ, 2023ರ ಜುಲೈ 19ರಂದು ಪವಿತ್ರಾ ಅವರಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಸೀಳು ತುಟಿ ಇತ್ತು. ಬಾಯಿಯ ಒಳಗೆ ಸೀಳು ಅಂಗುಳು ಹಾಗು ಮೂಗಿನ ಒಳಗೆ ಸರಿಯಾದ ಬೆಳವಣಿಗೆ ಆಗಿರಲಿಲ್ಲ. ಮಗುವಿನಲ್ಲಿ ನ್ಯೂನತೆ ಇರುವುದನ್ನು ಸ್ಕಾೃನಿಂಗ್ ವರದಿಯಲ್ಲಿ ಸರಿಯಾಗಿ ತಿಳಿಸಿದ್ದರೆ ಗರ್ಭಪಾತ ಮಾಡಿಸಲು ಅವಕಾಶವಿತ್ತು. ಆದರೆ, ಡಾ.ಸುಜಾತಾ ಅವರು, ಸ್ಕಾೃನಿಂಗ್ ವರದಿಯಲ್ಲಿ ಈ ವಿಷಯ ತಿಳಿಸದೆ ಸೇವಾ ನ್ಯೂನತೆ ಎಸಗಿದ್ದಾರೆ. ಇದರಿಂದ ಮಗು ಜೀವಿತಾವಧಿವರೆಗೂ ಶಾಶ್ವತ ವೈದ್ಯೋಪಚಾರ ಪಡೆಯುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಉಂಟಾದ ಮಾನಸಿಕ ಹಿಂಸೆ, ನೋವು, ವೈದ್ಯಕೀಯ ವೆಚ್ಚದ ಪರಿಹಾರವಾಗಿ ಒಟ್ಟು 50 ಲಕ್ಷ ರೂ. ಪರಿಹಾರ ಕೊಡಿಸುವಂತೆ ಪವಿತ್ರಾ ಅವರು, ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿ ದಾಖಲಿಸಿದ್ದರು.
ಆಯೋಗದ ಅಧ್ಯಕ್ಷೆ ಸಿ.ಎಂ.ಚಂಚಲಾ, ಸದಸ್ಯರಾದ ಎಚ್.ವಿ.ಮಹಾದೇವ, ಆರ್.ಅನುಪಮಾ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಡಾ.ಸುಜಾತಾ ಅವರ ಸೇವಾ ನಿರ್ಲಕ್ಷೃದಿಂದ ತಪ್ಪಾದ ಸ್ಕಾೃನಿಂಗ್ ವರದಿ ನೀಡಿ ಅಂಗವಿಕಲ ಮಗು ಜನಿಸಲು ಕಾರಣವಾಗಿದ್ದಾರೆ ಎಂದು ತೀರ್ಮಾನಿಸಿದ ಪೀಠವು, ದೂರುದಾರ ಮಹಿಳೆಗೆ 30 ಲಕ್ಷ ರೂ. ಪರಿಹಾರ ಕೊಡುವಂತೆ ಡಾ.ಸುಜಾತಾ ಅವರಿಗೆ ಸೂಚಿಸಿದೆ. ಇದರಲ್ಲಿ 15 ಲಕ್ಷ ರೂಪಾಯಿಯನ್ನು ಮಗು 18 ವರ್ಷ ವಯಸ್ಸಿಗೆ ಬರುವವರೆಗೂ ಮಗುವಿನ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡುವಂತೆ ಹಾಗು ಉಳಿದ 15ಲಕ್ಷ ರೂ. ಅನ್ನು ವೈದ್ಯಕೀಯ ವೆಚ್ಚ, ಮಾನಸಿಕ ಹಿಂಸೆಯ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.
ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿಯ ಹಣದಿಂದ ಮಗುವಿನ ಭವಿಷ್ಯದ ವೈದ್ಯಕೀಯ ವೆಚ್ಚಗಳನ್ನು ಹಾಗು ಇತರೆ ಖರ್ಚುಗಳನ್ನು ಭರಿಸಬಹುದು. ದೂರುದಾರರ ಖರ್ಚಿಗಾಗಿ 50 ಸಾವಿರ ರೂ. ನೀಡುವಂತೆ ಆದೇಶಿಸಿದೆ. ಈ ಮೊತ್ತವನ್ನು ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ನೀಡಬೇಕು. ತಪ್ಪಿದ್ದಲ್ಲಿ ಒಟ್ಟು ಮೊತ್ತಗಳ ಮೇಲೆ ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.