ಹುಬ್ಬಳ್ಳಿ: ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ತೆರಳಲಿರುವ ನೂರಾರು ವಲಸೆ ಕಾರ್ವಿುಕರು ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯಿಂದ ತಮ್ಮ ರಾಜ್ಯಕ್ಕೆ ರೈಲು ಹೊರಡಲಿದೆಯೆಂದು ತಪ್ಪಾಗಿ ಭಾವಿಸಿ ಗುರುವಾರ ರಾತ್ರಿಯೇ ನಗರಕ್ಕೆ ಆಗಮಿಸಿ ಪರದಾಡಿದ್ದಾರೆ.
ಗದಗ, ಬೆಳಗಾವಿ, ಹಾವೇರಿ, ಕಾರವಾರ ಸೇರಿ ವಿವಿಧ ಜಿಲ್ಲೆಗಳ ಕಾರ್ವಿುಕರು ಗುರುವಾರ ತಡರಾತ್ರಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸದ್ಯಕ್ಕೆ ಯಾವುದೇ ರೈಲು ಇಲ್ಲವೆಂದು ಸೂಚಿಸಿದ ಆರ್ಪಿಎಫ್ ಸಿಬ್ಬಂದಿ, ಅವರನ್ನು ಹೊರಹಾಕಿದ್ದಾರೆ.
ರೈಲ್ವೆ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದವರೆಗೆ ನಡೆದುಕೊಂಡು ಹೋದ ವಲಸೆ ಕಾರ್ವಿುಕರು, ನಿಲ್ದಾಣದ ಆವರಣದಲ್ಲಿಯೇ ಇಡೀ ರಾತ್ರಿ ಕಳೆದಿದ್ದಾರೆ.
ಬಹುತೇಕರು ಖಾಸಗಿ ವಾಹನಗಳಲ್ಲಿ ಕುಟುಂಬ ಸಮೇತ ಹುಬ್ಬಳ್ಳಿಗೆ ಆಗಮಿಸಿದ್ದು, ಇನ್ನೂ ಕೆಲವರು ನಡೆದುಕೊಂಡು ಆಗಮಿಸಿದ್ದಾರೆ. ಈ ವಲಸೆ ಕಾರ್ವಿುಕರಿಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಳಗಿನ ಉಪಾಹಾರ ಹಾಗೂ ಊಟ ಒದಗಿಸಿದವು. ಆದರೆ, ಚಳಿಯಲ್ಲಿಯೇ ಮಕ್ಕಳು, ಮಹಿಳೆಯರು, ವೃದ್ಧರು ಹೊಸ ಬಸ್ ನಿಲ್ದಾಣದ ಆವರಣದಲ್ಲಿಯೇ ಇಡೀ ರಾತ್ರಿ ಕಳೆದಿದ್ದಾರೆ. ವಲಸೆ ಕಾರ್ವಿುಕರನ್ನು ಕರೆದೊಯ್ಯುವ ಶ್ರಮಿಕ ಎಕ್ಸ್ಪ್ರೆಸ್ ರೈಲು ಬಿಹಾರದ ಕತಿಹಾರಕ್ಕೆ ಹುಬ್ಬಳ್ಳಿಯಿಂದ ಮೇ 17 ರಂದು ಸಂಜೆ 5 ಗಂಟೆಗೆ ಹೊರಡಲಿದ್ದು, ಮೇ 19ರಂದು ಬೆಳಗ್ಗೆ 6.30ಕ್ಕೆ ಕತಿಹಾರ್ ತಲುಪಲಿದೆ. ಮೇ 17 ಮತ್ತು 18ರಂದು ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು, ಮಾರನೇ ದಿನ ಮಧ್ಯಾಹ್ನ 4 ಗಂಟೆಗೆ ಉತ್ತರ ಪ್ರದೇಶದ ಬಸ್ತಿಗೆ ಲಖನೌ ಮಾರ್ಗವಾಗಿ ತಲುಪಲಿದೆ. ಅದುವರೆಗೆ ಈ ಕಾರ್ವಿುಕರಿಗೆ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದೆ.
ಹೆಸರು ನೋಂದಣಿ: ಹೊಸ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿರುವ ವಲಸೆ ಕಾರ್ವಿುಕರ ಹೆಸರುಗಳನ್ನು ಕಾರ್ವಿುಕ ಇಲಾಖೆ ಸಿಬ್ಬಂದಿ ಸೇವಾ ಸಿಂಧು ವೆಬ್ಸೈಟ್ನಲ್ಲಿ ನೋಂದಾಯಿಸಿದರು. ಬೆಳಗ್ಗೆ 7 ಗಂಟೆಯಿಂದಲೇ ಹೆಸರು ನೋಂದಾಯಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಶನಿವಾರವೂ ಹೆಸರು ನೋಂದಣಿ ಕಾರ್ಯ ಮುಂದುವರಿಯಲಿದೆ. ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಹೊಸ ಬಸ್ ನಿಲ್ದಾಣಕ್ಕೆ ತೆರಳಿ, ಹೆಸರು ನೋಂದಣಿ ಕಾರ್ಯ ಪರಿಶೀಲಿಸಿದರು. ರೈಲು ಹೊರಡುವ ದಿನವು ಸಹ ಕಾರ್ವಿುಕರು ರೈಲ್ವೆ ನಿಲ್ದಾಣದ ಆವರಣದಲ್ಲಿ ಹೆಸರು ನೋಂದಾಯಿಸಬಹುದು.
ಗುರುವಾರ ಮಧ್ಯರಾತ್ರಿ 12.30ಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮಹಾರಾಷ್ಟ್ರದ ಸಿಂಧದುರ್ಗದಿಂದ ವಿಜಯಪುರಕ್ಕೆ ತೆರಳುವ ಶ್ರಮಿಕ ಎಕ್ಸ್ಪ್ರೆಸ್ ರೈಲು ಶುಕ್ರವಾರ ಬೆಳಗ್ಗೆ ಸುಮಾರು 6 ಗಂಟೆಗೆ ಆಗಮಿಸಿತು. ಧಾರಾಕಾರ ಮಳೆಯಿಂದಾಗಿ ಈ ರೈಲು ಆಗಮಿಸುವುದು ತಡವಾಯಿತು. ಸಿಂಧದುರ್ಗದಿಂದ ಬಂದ ಕೆಲ ವಲಸೆ ಕಾರ್ವಿುಕರು ನಗರದ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ. ಅವರನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಾರಿಗೆ ಬಸ್ಗಳಲ್ಲಿ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಲಾಗಿದೆ.================