ಬೆಂಗಳೂರು: ಹೂಡಿಕೆದಾರರಿಗೆ ವಂಚನೆ ಎಸಗಿದ ಆರೋಪದಲ್ಲಿ ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದ ರಾಮನಗರ ಉಪ ವಿಭಾಗಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಇಂತಹ ತಪ್ಪಿಗೆ ನಿಮ್ಮನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ರಾಮನಗರ ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್ ಖುದ್ದು ಹಾಜರಿದ್ದರು. ಸರ್ಕಾರದ ಪರ ವಕೀಲರು, ಸಂವಹನ ಕೊರತೆಯಿಂದಾಗಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸುವಲ್ಲಿ ಲೋಪವಾಗಿದೆ. ಈ ಬಗ್ಗೆ ವಿವರಣೆ ನೀಡಿ ಮಾ.5ರಂದು ಎಸಿ ಪ್ರಮಾಣಪತ್ರ ಸಲ್ಲಿಸಿದ್ದು, ತಮ್ಮ ತಪ್ಪಿಗಾಗಿ ಬೇಷರತ್ ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ತಿಳಿಸಿದರು.
ಆಗ ನ್ಯಾಯಪೀಠ, ಕ್ಷಮೆ ಕೋರಿದ ಮಾತ್ರಕ್ಕೆ ಎಲ್ಲವೂ ಸರಿ ಹೋಗುವುದಿಲ್ಲ. ನ್ಯಾಯಾಲಯದ ಹಾದಿ ತಪ್ಪಿಸಿದ್ದಕ್ಕಾಗಿ ಈ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ, ನ್ಯಾಯಾಂಗ ನಿಂದನೆ ಎಸಗಿರುವ ಅವರನ್ನು ಜೈಲಿಗೆ ಕಳುಹಿಸುವುದಾಗಿ ಆಕ್ರೋಶದಿಂದ ನುಡಿಯಿತು.
ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ: ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪೀಠ, ನೀವೇನು ಮಾಡಿದ್ದೀರಿ ಎನ್ನುವುದು ನಿಮಗೆ ಅರ್ಥವಾಗಿದೆಯೇ, ಈ ತಪ್ಪಿಗೆ ನೀವು ನಿಮ್ಮ ಕೆಲಸವನ್ನೂ ಕಳೆದುಕೊಳ್ಳಬಹುದು, ಹೈಕೋರ್ಟ್ ಅನ್ನು ಇಷ್ಟು ಹಗುರವಾಗಿ ಪರಿಗಣಿಸಿರುವಿರಾ, ಸರಿಯಾಗಿ ಪರಿಶೀಲಿಸದೆ ಮಾಹಿತಿ ನೀಡಬಹುದು ಎಂದುಕೊಂಡಿದ್ದೀರಾ? ಸರ್ಕಾರದ ಪರ ವಕೀಲರಿಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣ ಅಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಮಾಹಿತಿ ನೀಡಿದ್ದೀರಿ. ಅದೂ ಕೇವಲ ಒಮ್ಮೆಯಲ್ಲ, ನಾಲ್ಕು ಬಾರಿ ಇದೇ ರೀತಿ ಮಾಹಿತಿ ಕೊಟ್ಟಿದ್ದೀರಿ. ಆದರೆ, ನೀವು ಮಾಹಿತಿ ನೀಡಿರುವ ದಿನಾಂಕಗಳಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. 2022ರ ಜನವರಿಯಲ್ಲಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಟ್ರಾನ್ಸ್‌ರ್ ಪಿಟಿಷನ್ ಸಲ್ಲಿಸಲಾಗಿದ್ದು, ಅದಿನ್ನೂ ನ್ಯಾಯಪೀಠದ ಮುಂದೆ ವಿಚಾರಣೆಗೂ ಬಂದಿಲ್ಲ ಎನ್ನುವುದು ಈಗ ತಿಳಿದುಬಂದಿದೆ. ಈ ವಿಚಾರವನ್ನು ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡು ನಿಮ್ಮ ವಿರುದ್ಧ ಕ್ರಮ ಜರುಗಿಸಬಹುದಲ್ಲವೇ, ಹದಿನಾಲ್ಕು ವರ್ಷಗಳ ಸೇವಾನುಭವ ಇದೆ ಎನ್ನುತ್ತೀರಿ. ಇಷ್ಟು ವರ್ಷಗಳಿಂದ ನೀವು ಕರ್ತವ್ಯ ನಿರ್ವಹಿಸುತ್ತಿರುವ ರೀತಿ ಇದೇ ಏನು ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ಸಮಜಾಯಿಷಿ ನೀಡಿದ ಸರ್ಕಾರ: ಆರಂಭಿಕ ಹಂತದಲ್ಲಿ ಎಸಿ ಪ್ರಕರಣದ ಸಕ್ಷಮ ಪ್ರಾಧಿಕಾರವಾಗಿದ್ದರು. ಆ ಬಳಿಕ ವಿಶೇಷ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಯಿತು. ಎಸಿ ಕಚೇರಿಯಲ್ಲಿದ್ದ ದಾಖಲೆಗಳು ಅದಾಗಲೇ ವಿಶೇಷ ಅಧಿಕಾರಿಯ ಕಚೇರಿಗೆ ವರ್ಗಾಯಿಸಲಾಗಿತ್ತು. ಈ ಮಧ್ಯೆ, ಹಗರಣಕ್ಕೆ ಸಂಬಂಧಿಸಿದಂತೆ ಇತರ ರಾಜ್ಯಗಳ ಕೋರ್ಟ್‌ಗಳಲ್ಲಿರುವ ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದು ಕೋರ್ಟ್ ನಿಯೋಜಿಸಲು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂಬಂಧ 2021ರ ಆ.7ರಂದು ಸರ್ಕಾರ ಆದೇಶ ಹೊರಡಿಸಿತ್ತು. ಎಸ್‌ಎಲ್‌ಪಿ ಸಲ್ಲಿಸಬೇಕೇ ಅಥವಾ ಟ್ರಾನ್ಸ್‌ರ್ ಅರ್ಜಿ ಸಲ್ಲಿಸಬೇಕೇ ಎಂಬ ಗೊಂದಲವಿದ್ದ ಕಾರಣ, ಸೆ.21ರಂದು ತಿದ್ದೋಲೆ ಹೊರಡಿಸಲಾಗಿತ್ತು. ಇವೆಲ್ಲದರ ಆಧಾರದಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಗ್ರಹಿಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಯಾವುದೇ ಉದ್ದೇಶ ಅಧಿಕಾರಿಗೆ ಇರಲಿಲ್ಲ. ಮಾಡಿದ ತಪ್ಪಿಗೆ ಅವರು ಬೇಷರತ್ ಕ್ಷಮೆ ಯಾಚಿಸಿದ್ದು, ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಎಚ್ಚರವಹಿಸಲಿದ್ದಾರೆ. 2022ರ ಜ.5ರಂದು ಸುಪ್ರೀಂಕೋರ್ಟ್‌ನಲ್ಲಿ ಟ್ರಾನ್ಸ್‌ರ್ ಅರ್ಜಿ ಸಲ್ಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಸಮಜಾಯಿಷಿ ನೀಡಲು ಮುಂದಾದರು.
ಎಸಿಗೆ ಎಚ್ಚರಿಕೆ: ಆಗ ನ್ಯಾಯಪೀಠ, ಹೈಕೋರ್ಟ್ ಎಂದರೆ ಎಷ್ಟು ಲಘುವಾಗಿ ಪರಿಗಣಿಸಿದ್ದೀರಿ ಎನ್ನುವುದು ಇದೆಲ್ಲದರಿಂದ ಅರ್ಥವಾಗುತ್ತಿದೆ. ಇದಕ್ಕೆ ಕೇವಲ ಅಧಿಕಾರಿ ಮಾತ್ರವಲ್ಲ, ನೀವೂ ಸಹ ಹೊಣೆಯಾಗಿದ್ದೀರಿ ಎಂದು ಸರ್ಕಾರದ ಪರ ವಕೀಲರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿತು.
ಅಂತಿಮವಾಗಿ ಉಪ ವಿಭಾಗಾಧಿಕಾರಿಯ ಪ್ರಮಾಣಪತ್ರ ದಾಖಲಿಸಿಕೊಂಡ ಪೀಠ, ಉದ್ದೇಶಪೂರ್ವವಾಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿಲ್ಲ ಎಂಬ ಅಧಿಕಾರಿಯ ವಿವರಣೆ ಪರಿಗಣಿಸಿ, ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಆದರೆ, ರಾಮನಗರ ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡುತ್ತಿದೆ. ಭವಿಷ್ಯದಲ್ಲಿ ಅವರು ಮತ್ತಷ್ಟು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಜೂನ್‌ಗೆ ಮುಂದೂಡಿತು.