ಜಿಲ್ಲೆ

ತಪ್ಪು ತಿದ್ದಿಕೊಳ್ಳದಿದ್ದರೆ ಶಿಸ್ತು ಕ್ರಮ : ಜೆಡಿಎಸ್​ ತಾಲೂಕು ಅಧ್ಯಕ್ಷೆ ರಾಜರಾಜೇಶ್ವರಿ ಎಚ್ಚರಿಕೆ

ಕೋಲಾರ: ನಗರಸಭೆ ಉಪಾಧ್ಯಕ್ಷ ಪ್ರವಿಣ್​ಗೌಡ ವಿರುದ್ಧ ಕಾಂಗ್ರೆಸ್​ ಸದಸ್ಯರ ಜತೆಗೂಡಿ ಅವಿಶ್ವಾಸ ರ್ನಿಣಯಕ್ಕೆ ಸಹಿ ಹಾಕಿರುವ ನಾಲ್ವರು ಜೆಡಿಎಸ್​ ಸದಸ್ಯರು ತಪ್ಪು ತಿದ್ದಿಕೊಂಡರೆ ಸರಿ, ಇಲ್ಲವಾದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷೆ ಕೆ.ಆರ್​.ರಾಜರಾಜೇಶ್ವರಿ ಎಚ್ಚರಿಸಿದರು.

ನಗರದ ಜೆಡಿಎಸ್​ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಹಾಜರಿದ್ದ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದ ನಂತರ ಮಾತನಾಡಿದರು.

ಪಕ್ಷದ ಗಮನಕ್ಕೆ ತಾರದೆ ನಾಲ್ವರು ಕಾಂಗ್ರೆಸ್​ ಸದಸ್ಯರೊಂದಿಗೆ ಸೇರಿ ಉಪಾಧ್ಯಕ್ಷ ಪ್ರವಿಣ್​ ಗೌಡ ವಿರುದ್ಧ ಅವಿಶ್ವಾಸ ರ್ನಿಣಯ ಮಂಡನೆಗೆ ಮುಂದಾಗಿದ್ದು, ಶಿಸ್ತು ಉಲ್ಲಂಘನೆ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್​ ಎಲ್ಲ ಸದಸ್ಯರಿಗೂ ಈ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರೂ ಅಧ್ಯಕ್ಷೆ ಸೇರಿ ಇಬ್ಬರು ಗೈರಾಗಿರುವುದು ಸಮಂಜಸವಲ್ಲ. ಇಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದು, ಮಾ.26ರಂದು ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್​ಸಿ ಇಂಚರಗೋವಿಂದರಾಜು, ಕೋರ್​ ಕಮಿಟಿ ಸದಸ್ಯ ಸಮೃದ್ಧಿ ಮಂಜುನಾಥ್​ ಅವರಿಗೆ ಈ ವರದಿ ಸಲ್ಲಿಸುವುದಾಗಿ ಹೇಳಿದರು.

ಪ್ರವಿಣ್​ಗೌಡ ವಿರುದ್ಧ ಕಾಂಗ್ರೆಸ್​ ಸದಸ್ಯರು ಮಂಡಿಸಿರುವ ಅವಿಶ್ವಾಸ ರ್ನಿಣಯಕ್ಕೆ ಸಂಬಂಧಿಸಿದಂತೆ ಏ.7ರಂದು ನಗರಸಭೆಯಲ್ಲಿ ಕರೆದಿರುವ ಸಭೆಯಲ್ಲಿ ಪಕ್ಷದ ಸೂಚನೆ ಪಾಲಿಸಬೇಕು. ಇಲ್ಲವಾದರೆ ಕ್ರಮ ತೆಗೆದುಕೊಳ್ಳಲಾಗುವುದು. ಅದರೊಳಗೆ 8 ಸದಸ್ಯರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ಸಹಿ ಮಾಡಿರುವವರು ತಪ್ಪನ್ನು ತಿದ್ದ್ದಿಕೊಂಡರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಬಾರದೆ ಹೋದರೆ ವರಿಷ್ಠರ ಸೂಚನೆ ಮೇರೆಗೆ ವಿಪ್​ ಜಾರಿ ಮಾಡುತ್ತೇವೆ. ಅದನ್ನು ಮೀರಿ ಕಾಂಗ್ರೆಸ್​ ಜತೆಗೂಡಿದರೆ ಆ ಸದಸ್ಯರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು. ವಿಪ್​ ಉಲ್ಲಂಘಿಸಿದರೆ ಸದಸ್ಯತ್ವ ರದ್ದು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ನೀಡಲಾಗುವುದು ಎಂದು ಎಚ್ಚರಿಸಿದರು.

ಅಧ್ಯಕ್ಷೆ ಗೈರು: ಸಭೆಗೆ ಉಪಾಧ್ಯಕ್ಷ ಪ್ರವಿಣ್​ಗೌಡ, ಸದಸ್ಯರಾದ ಸೂರಿ, ರಾಕೇಶ್​, ಇದಾಯತ್​ ಹಾಜರಾಗಿದ್ದರು. ಶಮತಾಜ್​ ಪರ ಅವರ ಪತಿ ಮಹ್ಮದ್​ ರಫೀ, ನಗ್ಮಾಭಾನು ಪರ ಏಜಾಜ್​ ಆಗಮಿಸಿದ್ದರು. ಆದರೆ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್​ ಮತ್ತು ಸದಸ್ಯ ಕೆ.ಮಂಜುನಾಥ್​ ಗೈರು ಹಾಜರಾಗಿದ್ದರು.

ಜೆಡಿಎಸ್​ ಜಿಲ್ಲಾ ಕಾರ್ಯಧ್ಯಕ್ಷ ಬಣಕನಹಳ್ಳಿ ನಟರಾಜ್​, ವಕೀಲರಾದ ರತ್ನಮ್ಮ, ತಾಪಂ ಮಾಜಿ ಸದಸ್ಯ ಗೋಪಾಲಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜ್​, ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್​, ನಗರಸಭೆ ಮಾಜಿ ಸದಸ್ಯ ವೆಂಕಟೇಶ್​, ಅಣ್ಣಹಳ್ಳಿ ಯಾಮಣ್ಣ, ಉಮರ್​, ಅನ್ವರ್​ ಮತ್ತಿತರಿದ್ದರು.

ಸದಸ್ಯ ಇದಾಯತ್​ ಮಾತನಾಡಿ, ಪ್ರವಿಣ್​ಗೌಡ ಸಂಸದ ಮುನಿಸ್ವಾಮಿ ಜತೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನನಗೆ ಇಷ್ಟವಾಗಲಿಲ್ಲ. ಅದಕ್ಕಾಗಿಯೇ ನಾನು ಕಾಂಗ್ರೆಸ್​ನವರ ಜತೆಗೂಡಿ ಅವಿಶ್ವಾಸ ರ್ನಿಣಯಕ್ಕೆ ಸಹಿ ಮಾಡಿದ್ದಾಗಿ ಹೇಳಿದರು. ಇನ್ನುಳಿದಂತೆ ಸದಸ್ಯೆ ಶಮತಾಜ್​ ಪರವಾಗಿ ಅವರ ಪತಿ ಮಹಮ್ಮದ್​ ರಫೀ ಮಾತನಾಡಿ ಅಧ್ಯಕ್ಷರು -ಉಪಾಧ್ಯಕ್ಷರ ನಡುವೆ ಹೊಂದಾಣಿಕೆಯಿಲ್ಲ. ಇದರಿಂದ ನಮ್ಮ ವಾರ್ಡ್​ಗಳಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಅದಕ್ಕಾಗಿ ನಮ್ಮ ಪತ್ನಿ ಉಪಾಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸ ರ್ನಿಣಯಕ್ಕೆ ಸಹಿ ಮಾಡಿದ್ದಾರೆ ಎಂದು ಹೇಳಿದರೆ, ಮತ್ತೋರ್ವ ಸದಸ್ಯೆ ನಗ್ಮಾಭಾನು ಪರವಾಗಿ ಅವರ ಪತಿ ಏಜಾಜ್​ ಮಾತನಾಡಿ, ಜೆಡಿಎಸ್​ ಪಕ್ಷದಿಂದ ಏನೇ ತೀಮಾರ್ನ ತೆಗೆದುಕೊಂಡರೂ ಅದಕ್ಕೆ ನನ್ನ ಪತ್ನಿ ಸಹಕಾರ ಕೊಡುತ್ತಾರೆ ಎಂದು ಹೇಳಿದರು. ಸೂರಿ, ರಾಕೇಶ್​ ಮಾತನಾಡಿ, ಅವಿಶ್ವಾಸ ರ್ನಿಣಯಕ್ಕೆ ಸಹಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ನಾನು ಯಾವುದೇ ರೀತಿಯಲ್ಲಿ ಪಕ್ಷಕ್ಕೆ ಕಳಂಕವಾಗುವಂತೆ ನಡೆದುಕೊಂಡಿಲ್ಲ. ಭ್ರಷ್ಟ್ಟಾಚಾರ ನಡೆಸಿಲ್ಲ, ಹಗರಣಗಳು ನನ್ನ ಮೇಲಿಲ್ಲ. ನಮಗೆ ಬಹುಮತ ಇಲ್ಲದಿದ್ದರೂ ಪಕ್ಷೇತರರು ಹಾಗೂ ವಿಪಕ್ಷದವರ ಬೆಂಬಲದಿಂದ ಅಧಿಕಾರ ಪಡೆದಿದ್ದೆವು. ಪಕ್ಷಾತಿತ ಆಡಳಿತ ನಡೆಸಲಾಗುತ್ತಿತ್ತು. ವಿನಾಕಾರಣ ಅಧ್ಯಕ್ಷೆ ಶ್ವೇತಾ ಶಬರೀಶ್​ ವಿಪಕ್ಷದವರೊಂದಿಗೆ ಶಾಮೀಲಾಗಿ ನನ್ನ ವಿರುದ್ಧ ವೈಯುಕ್ತಿಕ ಹಗೆ ಸಾಧಿಸುತ್ತಿದ್ದಾರೆ. ಕಳೆದ 7 ತಿಂಗಳಿಂದ ನನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ತಾವುಗಳು ಆಗಲೇ ಶಿಸ್ತು ಕ್ರಮಕ್ಕೆ ಮುಂದಾಗಿದ್ದರೆ ಇಂದು ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಪ್ರವಿಣ್​ಗೌಡ, ಉಪಾಧ್ಯಕ್ಷ, ನಗರಸಭೆ.