ಸಿಂದಗಿ: ಪಟ್ಟಣದ ವಿವಿಧ ಮಹಿಳಾಪರ ಸಂಘಟನೆಗಳ ಪದಾಧಿಕಾರಿಗಳು ಮಣಿಪುರದಲ್ಲಿ ನಡೆದ ಅಮಾನವೀಯ ಕೃತ್ಯ ಖಂಡಿಸಿ ಶಿರಸ್ತೇದಾರ್ ಎಸ್.ಐ. ಚವ್ಹಾಣ ಅವರ ಮುಖಾಂತರ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕಿನ ಮಹಿಳಾ ಜಾಗರಣ ವೇದಿಕೆ ಅಧ್ಯಕ್ಷೆ ಶೈಲಜಾ ಸ್ಥಾವರಮಠ, ಮಹಾದೇವಿ ಅಂಬಲಿ, ಮಹಾನಂದಾ ಬಮ್ಮಣ್ಣಿ, ಸುನಂದಾ ಯಂಪೂರೆ, ಶ್ಯಾಮಲಾ ಮಂದೇವಾಲಿ, ಅನಸೂಯಾ ಪರಗೊಂಡ ಮತ್ತಿತರರು ಮಾತನಾಡಿ, ಮಣಿಪುರದಲ್ಲಿ ಅಸಹಾಯಕ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಮರುಕಳಿಸಬಾರದು. ಇಂತಹ ಅಮಾನುಷ್ಯ ಕೃತ್ಯಗಳಿಗೆ ಸರ್ಕಾರ ಮತ್ತು ನ್ಯಾಯಾಲಯಗಳು ದುಷ್ಕರ್ಮಿಗಳಿಗೆ ಉಗ್ರ ಶಿಕ್ಷೆ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಮಹಿಳೆಯರ ಮೇಲೆ ನಿತ್ಯ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರಗಳಿಂದ ಆತಂಕ ಎದುರಿಸುವಂತಾಗಿದ್ದು, ಭಯದಲ್ಲಿಯೇ ಬದುಕುವುದು ಅನಿವಾರ್ಯ ಎಂಬಂತಾಗಿದೆ. ನಮಗೆ ಕಾನೂನಿನ ರಕ್ಷಣೆಯೂ ಇಲ್ಲ. ಉತ್ತಮ ಆಡಳಿತ ವ್ಯವಸ್ಥೆಯೂ ಇಲ್ಲ ಎಂದು ತೀವ್ರ ಆಕ್ರೋಶ ಹೊರಹಾಕಿದರು.
ನಮಗಾಗಿ ಇರುವ ಕಾನೂನು ಮತ್ತು ನಮ್ಮನ್ನಾಳುವವರು ಕೈ ಕಟ್ಟಿ ಕುಳಿತಿದ್ದಾರೆ. ನಮ್ಮ ಅಳಲಿಗೆ ಕಡಿವಾಣ ಹಾಕುವಲ್ಲಿ ಕಠಿಣ ಕಾನೂನು ಜಾರಿಯಾಗಬೇಕು. ಅತ್ಯಾಚಾರ ನಡೆಸುವ ದುಷ್ಟರನ್ನು ಸಾರ್ವಜನಿಕವಾಗಿಯೇ ಶಿಕ್ಷಿಸಬೇಕು ಎಂದರು.
ಶರಣಮ್ಮ ನಾಯಕ, ಸಬಿಯಾಬೇಗಂ ಮರ್ತೂರ, ಸುನಂದಾ ಭಜಂತ್ರಿ, ಶಶಿಕಲಾ ಅಂಗಡಿ, ಸುಭದ್ರಾ ಅಂಬಾಜಿ, ತೇಜಸ್ವಿನಿ ಆರ್.ಎಚ್., ಅಪೂರ್ವ ಸ್ಥಾವರಮಠ, ನಿವೇದಿತಾ ಶಿವಶಿಂಪಿ ಇತರರಿದ್ದರು.