ರಾಯಬಾಗ ತಾಲೂಕಿನ ಗ್ರಾಪಂಗಳ ವ್ಯಾಪ್ತಿಯಲ್ಲಿ ಅಕ್ರಮ ಕಾಮಗಾರಿ ಕೈಗೊಳ್ಳುತ್ತಿರುವ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತ ಮುಖಂಡರು ತಾಪಂ ಕಚೇರಿ ಎದುರು ಪ್ರತಿಭಟಿಸಿದರು. ಸತ್ಯಪ್ಪ ಮಲ್ಲಾಪುರೆ, ತ್ಯಾಗರಾಜ ಕದಂ ಇತರರಿದ್ದರು. 
ಜಿಲ್ಲೆ

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ರಾಯಬಾಗ: ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ತಾಪಂ ಎದುರು ಗುರುವಾರ ಪ್ರತಿಭಟಿಸಿದರು. ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆಲಸಗಳಿಗೆ ಯಂತ್ರಗಳನ್ನು ಬಳಸಬಾರದು, ಜಾಬ್ ಕಾರ್ಡ್ ಹೊಂದಿದ ಸ್ಥಳೀಯರಿಗೆ ಕೆಲಸ ನೀಡಬೇಕು. ಆದರೆ, ಪಿಡಿಒಗಳು ಯಂತ್ರಗಳಿಂದ ಕೆಲಸ ಮಾಡಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಗ್ರಾಪಂಗಳಲ್ಲಿ ಸರ್ಕಾರದ ಆದೇಶದ ಪ್ರಕಾರ 68 ಮತ್ತು 42 ಸಾವಿರ ರೂ.ಗಳಲ್ಲಿ ಕುರಿ ಮತ್ತು ದನಗಳ ಶೆಡ್ ನಿರ್ಮಿಸಬೇಕು.

ಆದರೆ, ರೈತರಿಂದ ಹಣ ಪಡೆದ ಮೇಖಳಿ ಗ್ರಾಪಂ ಹಿಂದಿನ ಪಿಡಿಒ ನೂರ್ ಅಹಮ್ಮದ್ ಅವರನ್ನು ಅಮಾನತು ಮಾಡಬೇಕು. ಜತೆಗೆ ವಿವಿಧ ಕಾಮಗಾರಿಯಲ್ಲಿ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಯೋಜನಾಧಿಕಾರಿ ಎಸ್.ಎ. ಮಾನೆ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರೆ, ತ್ಯಾಗರಾಜ ಕದಮ್, ಗುರುನಾಥ ಹೆಗಡೆ, ವಿಜಯ ನಾಯಿಕ, ಮಹಾದೇವ ಮಡಿವಾಳ, ಪುಂಡಲೀಕ ಮಾನೆ, ಹನುಮಂತ ನಾಯಿಕ, ಸಿದ್ರಾಮ ಬಂಟನೂರೆ, ಇತರರಿದ್ದರು.