ಬಾಗಲಕೋಟೆ ನಗರದ ಜಿಪಂ ನೂತನ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿತು. ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಪ್ರಕಾಶ ಹುಕ್ಕೇರಿ, ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಇದ್ದರು. 
ಜಿಲ್ಲೆ

ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ

ಬಾಗಲಕೋಟೆ: ವಸತಿ ನಿಲಯ ಅಂಗನವಾಡಿಗಳಿಗೆ ಆಹಾರಧಾನ್ಯ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮಕ್ಕಳ ಆಹಾರ ವಿಷಯದಲ್ಲಿ ರಾಜಿ ಆಗುವುದಿಲ್ಲ. ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟದಿಂದ ಕೂಡಿರಬೇಕು. ಆಹಾರ ಪೂರೈಕೆದಾರರು, ಅಽಕಾರಿಗಳು ತಪ್ಪು ಮಾಡಿದರೆ ಪ್ರಕರಣ ದಾಖಲಿಸಲಾಗುವುದು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.


ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಆಹಾರ ಪೂರೈಕೆ ಒಬ್ಬರಿಂದ ಆಗುತ್ತಿದೆ. ಗುಣಮಟ್ಟ ಕಾಪಾಡುತ್ತಿಲ್ಲ. ಅವರೊಂದಿಗೆ ಅಧಿಕಾರಿಗಳು ಕೈಜೋಡಿಸಿರುವ ವಿಷಯ ಬೆಳಕಿಗೆ ಬಂದಿದೆ. ಮಕ್ಕಳ ಆಹಾರ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಿಮಿನಲ್ ಮೊಕ್ಕದ್ದಮ್ಮೆ ದಾಖಲಿಸಲಾಗುವುದು ಎಂದು ಹೇಳಿದರು.


ಈ ವೇಳೆ ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ ಧ್ವನಿ ಎತ್ತಿ, ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಅಂಗನವಾಡಿ ಕೇಂದ್ರಗಳಿಗೆ ನೀಡುವ ಆಹಾರಧಾನ್ಯ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಎಂಎಸ್‌ಪಿಟಿಸಿ ಮೂಲಕ ಸರಬರಾಜು ಆಗುತ್ತಿದ್ದು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಸಚಿವ ಸಿ.ಸಿ.ಪಾಟೀಲ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಗಮನಹರಿಸಿ ಪರಿಶೀಲನೆ ನಡೆಸುವ ಮೂಲಕ ಕ್ರಮವಹಿಸಬೇಕು. ಇಲ್ಲವಾದಲ್ಲಿ ಎಂಎಸ್‌ಪಿಟಿಸಿ ಬದಲಾಗಿ ಜಿಲ್ಲೆಯಲ್ಲಿ ಟಿಎಪಿಸಿಎಂಎಸ್‌ಗೆ ಆಹಾರ ಪೂರೈಕೆ ಜವಾಬ್ದಾರಿ ವಹಿಸಬೇಕು ಎಂದು ಸೂಚನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಸಂಶಯ ಬಂದಿದೆ. ಪ್ರಾಮಾಣಿಕವಾಗಿ ನೇಮಕಾತಿ ಆಗಬೇಕು. ಲೋಪವಾಗದಂತೆ ಕ್ರಮ ವಹಿಸಬೇಕು. ಸರಿಯಾದ ಮಾಹಿತಿ ಇಲ್ಲದೆ ಅರ್ಹ ಅಭ್ಯರ್ಥಿಗಳು ಅಂಗನವಾಡಿ ಸಿಬ್ಬಂದಿ ನೇಮಕಾತಿ ಆಯ್ಕೆಯಲ್ಲಿ ವಿಫಲರಾಗುತ್ತಿದ್ದಾರೆ. ಆ ವ್ಯಾಪ್ತಿಯಲ್ಲಿ ವಿಧವೆಯರು ಇದ್ದರೂ ಬೇರೆಯವರು ಆಯ್ಕೆಯಾಗುತ್ತಿರುವುದು ಸರಿಯಲ್ಲ. ನೇಮಕಾತಿ ಪ್ರಕ್ರಿಯೆ ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಶಾಸಕ ಸಿದ್ದು ಸವದಿ ಮಾತನಾಡಿ, ೨೦೧೯ ರಲ್ಲಿ ಪ್ರವಾಹ ಉಂಟಾದಾಗ ಹಾನಿಯಾದ ಶಾಲೆಗಳಿಗೆ ಇದುವರೆಗೂ ಕಾಯಕಲ್ಪ ಸಿಕ್ಕಿಲ್ಲ ಎಂದು ದೂರಿದರು. ಡಿಡಿಪಿಐ ಶ್ರೀಶೈಲ ಬಿರಾದಾರ ಪ್ರತಿಕ್ರಿಯಿಸಿ ಖಾಸಗಿ ಐಟಿ ಕಂಪನಿಯವರು ಶಾಲೆ ದುರಸ್ತಿ ಮಾಡುವುದಾಗಿ ಹೇಳಿದ್ದರು. ಆದರೆ ಅವರು ಮಾಡಿಲ್ಲ ಎಂದರು. ಮೂರು ವರ್ಷವಾದರೂ ಹಾಗೇ ಕುಳಿತರೇ ಹೇಗೆ? ಮಕ್ಕಳ ಗತಿ ಏನು? ಪುರಾಣ ಕೇಳೋಕೆ ನಾನು ಬಂದಿಲ್ಲ. ಕೂಡಲೇ ಶಾಲೆಗಳ ದುರಸ್ತಿ ಬಗ್ಗೆ ಗಮನ ಹರಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ ತಾಕೀತು ಮಾಡಿದರು.
ಅಮೃತ ಯೋಜನೆ ಅಡಿ ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಶಾಸಕರ ಅನುದಾನದಲ್ಲಿ ಶಾಲೆ ಕೊಠಡಿಗಳ ನಿರ್ಮಾಣ ಮಾಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರಬೇಕು ಎಂದು ಸಚಿವರು ಡಿಡಿಪಿಐಗೆ ಸೂಚಿಸಿದರು.
ಸಭೆಯಲ್ಲಿ ಸಚಿವರು ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರೇಷ್ಮೆ, ಪಂಚಾಯತ್ ರಾಜ್, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಪ್ರಕಾಶ ಹುಕ್ಕೇರಿ, ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಯುಕೆಪಿ ಜನರಲ್ ಮ್ಯಾನೇಜರ್ ರಾಹುಕ್‌ರತನ್ ಪಾಂಡೆ, ಅಪರ ಜಿಲ್ಲಾಽಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾನಿಧಿ ಪ್ರತಿಧ್ವನಿ:ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಹಾಗೂ ನೇಕಾರ ವಿದ್ಯಾನಿಧಿ ಯೋಜನೆ ಬಗ್ಗೆ ಸಭೆಯಲ್ಲಿ ಪ್ರತಿಧ್ವನಿಸಿತು. ಶಾಸಕ ಸಿದ್ದು ಸವದಿ ಮಾತನಾಡಿ, ಜಿಲ್ಲೆಯಲ್ಲಿ ನೇಕಾರರ ಮಕ್ಕಳಿಗೆ ಈ ಯೋಜನೆ ತಲುಪುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸರ್ವೇ ಪ್ರಕಾರ ೩೦ ಸಾವಿರ ಪೈಕಿ ಕೇವಲ ೭೦೦ ಜನ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಿಕ್ಕಿದೆ. ಉಳಿದವರಿಗೆ ಯಾಕಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಕೆರಳಿದ ಸಚಿವ ಸಿ.ಸಿ.ಪಾಟೀಲ, ನಾನು ಸಿಎಂ ಬಸವರಾಜ ಬೊಮ್ಮಾಯಿ ಆಪ್ತ ಸಚಿವ. ನನ್ನ ಉಸ್ತುವಾರಿ ಜಿಲ್ಲೆಯಲ್ಲಿ ವಿದ್ಯಾನಿಧಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದರೆ ಕೆಟ್ಟ ಹೆಸರು ಬರುತ್ತದೆ. ಇಂತಹ ಕೆಲಸ ಮಾಡಬೇಡಿ ಎಂದು ಜವಳಿ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಾನೇನ ಚಂದಕ ಬರ್ತಿನೇನ್?
ಸಭೆ ಆರಂಭದಲ್ಲಿ ಕಳೆದ ಕೆಡಿಪಿಯಲ್ಲಿ ಸೂಚನೆ ನೀಡಿದ ಕೆಲಸಗಳ ಬಗ್ಗೆ ಪರಿಶೀಲನೆ ಆರಂಭಿಸಿದ ಸಚಿವ ಸಿ.ಸಿ.ಪಾಟೀಲ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳ ಬೆವರು ಇಳಿಸಿದರು. ಜುಲೈ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ, ಕಚೇರಿ ಆವರಣದಲ್ಲಿ ಸಸಿ ನೆಡಲು ತಿಳಿಸಲಾಗಿತ್ತು. ಈವರೆಗೆ ಎಷ್ಟು ಸಸಿ ನೆಟ್ಟಿದ್ದೀರಿ ಅಂತ ಪ್ರಶ್ನಿಸಿದರು. ಈ ವೇಳೆ ಸಮರ್ಪಕ ಉತ್ತರಿಸಲಾಗದೆ ಅಧಿಕಾರಿಗಳು ತಡಬಡಾಯಿಸಿದರು. ಹೇಳಿದ ಕೆಲಸ ಮಾಡಲ್ಲ. ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಅಂದ್ರ ಏನ್, ನಾನೇನು ಚಂದಕ್ ಬರ್ತಿನೇನ ಅಂತ ಗರಂ ಆದರು.

ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿರುವ ಶಾಲೆ-ಕಾಲೇಜು, ವಸತಿ ನಿಲಯಗಳ ಆವರಣದಲ್ಲಿ ಸಸಿಗಳನ್ನು ನೆಡಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಽಕಾರಿಗಳಿಂದ ವಿವಿಧ ವಸತಿ ನಿಲಯಗಳ ಮಾಹಿತಿ ಪಡೆದುಕೊಂಡು ಸಸಿಗಳನ್ನು ನೆಡಲು ಕ್ರಮವಹಿಸಬೇಕು. ಸಸಿಗಳನ್ನು ನೆಟ್ಟ ಬಗ್ಗೆ ಪರಿಶೀಲನೆ ಕೈಗೊಳ್ಳುವಂತೆ ಜಿಪಂ ಸಿಇಒ ಟಿ.ಭೂಬಾಲನ್ ಸೂಚನೆ ನೀಡಿದರು.

ಪಶು ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಜಿಲ್ಲೆಗೆ ಮಂಜೂರಾದ ಸರ್ಕಾರಿ ಗೋಶಾಲೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಪುಣ್ಯಕೋಟಿ ದತ್ತು ಯೋಜನೆಯಡಿ ಜಿಲ್ಲೆಯಲ್ಲಿರುವ ಖಾಸಗಿ ಗೋಶಾಲೆಗಳಿಗೆ ಅಳವಡಿಸಬೇಕು. ಅಲ್ಲದೆ, ಜಿಲ್ಲೆಗೆ ಮಂಜೂರಾದ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಸಚಿವರು ಸೂಚನೆ ನೀಡಿದರು. ಈ ವೇಳೆ ಇಲಾಖೆ ಅಧಿಕಾರಿಗಳು ಸಂಚಾರಿ ವಾಹನಗಳಿಗೆ ಚಾಲಕರು ಇಲ್ಲ. ಇರುವ ಚಾಲಕರನ್ನು ಹೊಂದಾಣಿಕೆ ಮಾಡಿದ್ದೇವೆ ಎಂದು ಅಳಲು ತೋಡಿಕೊಂಡರು. ಸಚಿವ ಪಾಟೀಲ, ಇಲಾಖೆ ಮೇಲಽಕಾರಿಗಳಿಗೆ ದೂರವಾಣಿ ಕರೆ ಮಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ೧೩ ಸಂಚಾರಿ ವಾಹನಗಳು ಬಂದಿವೆ. ಕೇವಲ ೬ ಕ್ಕೆ ಚಾಲಕರು ಇದ್ದಾರೆ. ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.