ಮೈಸೂರು: ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ನಾವು ತಪ್ಪಾಗಿ ಭಾವಿಸಿದರೆ ವ್ಯಕ್ತಿತ್ವ ವಿಕಸನವಾಗುವುದಿಲ್ಲ ಎಂದು ಉತ್ತರಾದಿ ಮಠದ ವ್ಯವಸ್ಥಾಪಕ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.
ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಅಧಿಕ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಒಂದು ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಜೀವಿತಾವಧಿಯಲ್ಲಿ ದೊಡ್ಡ ವ್ಯಕ್ತಿಗಳಾಗಬೇಕು. ಸಣ್ಣ ಸಣ್ಣ ವಸ್ತು, ವಿಷಯ ಪ್ರಸಂಗಗಳ ಬಗ್ಗೆ ಟೀಕಿಸಬಾರದು. ನಕಾರಾತ್ಮಕ ಚಿಂತನೆ ಮಾಡಬಾರದೆಂದು ಭಾಗವತ ಸಂದೇಶ ನೀಡಿದೆ. ನಮ್ಮ ತಿಳಿವಳಿಕೆ ಮಟ್ಟದಿಂದಲೇ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಎಲ್ಲವನ್ನೂ ದೇವರೇ ಸೃಷ್ಟಿ ಮಾಡಿದ್ದಾನೆ. ಈ ಭಾವ ಇಲ್ಲದೆ ತಪ್ಪು ತಿಳಿವಳಿಕೆಯನ್ನೇ ಪ್ರಧಾನ ಮಾಡಿಕೊಂಡರೆ ನರಕ ಪ್ರಾಪ್ತಿಯಾಗುತ್ತದೆಂದು ಭಾಗವತ ಎಚ್ಚರಿಕೆ ನೀಡಿದೆ. ಹಾಗಾಗಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸುಂದರವಾದ ಜಗತ್ತನ್ನು, ಪವಿತ್ರವಾದ ಮಾನವ ಜನ್ಮವನ್ನೂ ಕೊಟ್ಟ ಭಗವಂತನ ಬಗ್ಗೆ ಕೃತಜ್ಞತೆ ಇಟ್ಟುಕೊಂಡರೆ ಜೀವನ ಸಾರ್ಥಕ ಎಂದರು.
ನಮ್ಮೊಳಗೆ ಇರುವ ಅಹಂಕಾರ, ಲೌಕಿಕ ವಸ್ತುಗಳ ಮೇಲೆ ಅತಿಯಾದ ಅಭಿಮಾನದಿಂದ ಹೊರಬಂದವರು ಮಾತ್ರ ಸಂತಸ, ಸಂಭ್ರಮದಿಂದ ಇರುತ್ತಾರೆಂದು ಭಾಗವತ ನಿದರ್ಶನಗಳ ಮೂಲಕ ತಿಳಿಸಿಕೊಟ್ಟಿದೆ. ಅದನ್ನು ಪಾಲಿಸುವುದಷ್ಟೇ ನಮ್ಮ ಧರ್ಮವಾಗಲಿ ಎಂದು ತಿಳಿಸಿದರು.
ಬಳಿಕ ಶ್ರೀ ಧನ್ವಂತರಿ ದೇವರಿಗೆ, ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಸತ್ಯ ಸಂತುಷ್ಟ ತೀರ್ಥರ ವೃಂದಾವನಗಳಿಗೆ ವಿಶೇಷ ಪೂಜೆ ಸಮರ್ಪಣೆಯಾಯಿತು.
ವಿಜಯವಾಣಿಗೆ ಶ್ಲಾಘನೆ
ಅಧಿಕ ಮಾಸದಲ್ಲಿ 33 ಸುವಸ್ತುಗಳಲ್ಲಿ ಭಗವಂತನ 33 ರೂಪವನ್ನು ಚಿಂತನೆ ಮಾಡಿ ಅವುಗಳನ್ನು ಸಾತ್ವಿಕರಿಗೆ ದಾನ ಮಾಡುವುದರಿಂದ ಸಾವಿರ ಪಟ್ಟು ಪುಣ್ಯ ಬರುತ್ತದೆ. ಹಾಗಾಗಿ ಈ ಮಾಸದಲ್ಲಿ ವಿವಿಧ ದಾನಗಳ ಜತೆಗೆ 33 ಸಂಖ್ಯೆಯ ವಿಜಯವಾಣಿ ಪತ್ರಿಕೆಯನ್ನೂ ಭಕ್ತರಿಗೆ ಉತ್ತರಾದಿ ಮಠದಲ್ಲಿ ವಿತರಣೆ ಮಾಡಲಾಗಿದೆ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.
ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ವಿವಿಧ ವಿಷಯಗಳಿಗೆ ಮಾನ್ಯತೆ ನೀಡಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯಕ್ಕೂ ಮಹತ್ವ ನೀಡುತ್ತಿದೆ. ಹಾಗಾಗಿ ಇದು ಪ್ರಸಾರ ಸಂಖ್ಯೆಯಲ್ಲೂ ಅಗ್ರಗಣ್ಯವಾಗಿದೆ. ಭಕ್ತರು ಕೊಂಡು ಓದುವ ಮೂಲಕ ಪತ್ರಿಕೆಗೆ ಬೆಂಬಲ ನೀಡಬೇಕು ಎಂದರು.