ಹುಬ್ಬಳ್ಳಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ. ಹೀಗಾಗಿ, ಪರೀಕ್ಷೆ ಕೇಂದ್ರಗಳಲ್ಲಿ ಸರತಿ ಸಾಲು ನಿತ್ಯವೂ ಬೆಳೆಯುತ್ತಿದೆ. ಇದರ ನಡುವೆಯೇ ಕರೊನಾ ಸೇನಾನಿಗಳು ಕೂಡ ಬಂದು ಸರತಿಯಲ್ಲಿ ನಿಲ್ಲದೆಯೇ ಇದೇ ಕೇಂದ್ರಗಳಲ್ಲಿ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ.
ಧಾರವಾಡದ ಜಿಲ್ಲಾ ಆಸ್ಪತ್ರೆ, ಡಿಮ್ಹಾನ್ಸ್, ಹುಬ್ಬಳ್ಳಿಯ ಕಿಮ್್ಸ, ಚಿಟಗುಪ್ಪಿ ಆಸ್ಪತ್ರೆ, ಗಣೇಶಪೇಟೆ, ಮ್ಯಾದಾರ ಓಣಿ, ತೊರವಿ ಗಲ್ಲಿ ಧಾರವಾಡದ ಮಹಾನಗರ ಪಾಲಿಕೆ ಆಸ್ಪತ್ರೆ ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಮುಖ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಿತ್ಯ ಸಾವಿರಾರು ಜನರ ಗಂಟಲ ದ್ರವ ಸಂಗ್ರಹ ಮಾಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯ ಪಾಲಿಕೆ ಆಸ್ಪತ್ರೆಗಳಲ್ಲೇ ನಿತ್ಯ 300 ರಿಂದ 400 ಜನರ ಗಂಟಲ ದ್ರವ ಸಂಗ್ರಹಿಸಲಾಗುತ್ತಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲೂ ಕೇಂದ್ರಗಳಿವೆ.
ಸೋಂಕು ಪತ್ತೆ ಪರೀಕ್ಷೆಗಾಗಿ ಬೆಳಗ್ಗೆಯಿಂದಲೇ ಗರ್ಭಿಣಿಯರು, ವೃದ್ಧರು, ಯುವಕರು, ಬಾಲಕರು ಸೇರಿ ಹಲವರು ಗಂಟಲ ದ್ರವ ಸಂಗ್ರಹ ಕೇಂದ್ರದ ಎದುರು ಸರದಿಯಲ್ಲಿ ನಿಂತಿರುತ್ತಾರೆ.
ಈ ಸಂದರ್ಭದಲ್ಲಿ ತೀವ್ರ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಸೋಂಕಿನ ಇತರ ಲಕ್ಷಣ ಇರುವವರು ಬಂದರೆ ಮೊದಲು ಅವರ ಗಂಟಲ ದ್ರವ ಸಂಗ್ರಹಿಸಲಾಗುತ್ತದೆ. ಸೋಂಕಿನ ಲಕ್ಷಣ ಹೊಂದಿರುವವರು ಸೀನಿದರೆ ಅಥವಾ ಕೆಮ್ಮಿದರೆ ಸರದಿಯಲ್ಲಿ ನಿಂತಿರುವ ಇತರರಿಗೆ ಸೋಂಕು ತಗಲುವ ಅಪಾಯ ಇರುವುದರಿಂದ, ಅವರಿಗೆ ಆದ್ಯತೆ ನೀಡಲಾಗುತ್ತದೆ.
ಪೊಲೀಸರು, ಆರೋಗ್ಯ ಹಾಗೂ ಕಂದಾಯ ಇಲಾಖೆಯವರನ್ನು ಕರೊನಾ ಸೇನಾನಿಗಳು ಎಂದು ಪರಿಗಣಿಸಲಾಗುತ್ತದೆ. ಈ ಕರೊನಾ ಸೇನಾನಿಗಳು ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿದಾಗ ಸರದಿಯಲ್ಲಿ ನಿಲ್ಲದೆಯೇ ಆದ್ಯತೆ ಮೇಲೆ ಟೆಸ್ಟ್ ಮಾಡಿಸಿಕೊಳ್ಳುತ್ತಾರೆ. ಇದರಿಂದಾಗಿ, ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಂತಹ ಗರ್ಭಿಣಿಯರು, ವೃದ್ಧರು ಮತ್ತಷ್ಟು ಕಾಯುವ ತೊಂದರೆ ಅನುಭವಿಸಬೇಕಾಗಿದೆ.
ಮಂಗಳವಾರ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಇದೇ ರೀತಿಯ ಘಟನೆ ನಡೆಯಿತು. ಗಂಟಲ ದ್ರವ ಸಂಗ್ರಹಕ್ಕಾಗಿ 15ಕ್ಕೂ ಹೆಚ್ಚು ಪೊಲೀಸರು ಚಿಟಗುಪ್ಪಿ ಆಸ್ಪತ್ರೆಗೆ ಬಂದಿದ್ದರು. ಅವರಿಗಿಂತಲೂ ಮೊದಲು ಸರದಿಯಲ್ಲಿ ನಿಂತಿದ್ದ ಜನರನ್ನು ಪಕ್ಕಕ್ಕೆ ಸರಿಸಿ, ಪೊಲೀಸರ ಗಂಟಲ ದ್ರವ ಸಂಗ್ರಹಕ್ಕೆ ಅಲ್ಲಿನ ಸಿಬ್ಬಂದಿ ಆದ್ಯತೆ ನೀಡಿದರು. ಈ ಸಮಯದಲ್ಲಿ ಸಾಲಿನಲ್ಲಿ ಕೆಲ ವೃದ್ಧರು ಹಾಗೂ ಒಬ್ಬ ಗರ್ಭಿಣಿಯೂ ನಿಂತಿದ್ದರು. ಅವರೆಲ್ಲರ ಪಾಳಿ ಹಿಂದಕ್ಕೆ ಹೋಗಿ, ವಿಳಂಬವಾಯಿತು.
ಇಂತಹ ತೊಂದರೆ ತಪ್ಪಿಸಲು ಕರೊನಾ ಸೇನಾನಿಗಳು ಹಾಗೂ ಸೋಂಕಿನ ತೀವ್ರ ಲಕ್ಷಣ ಇರುವವರ ಗಂಟಲ ದ್ರವ ಸಂಗ್ರಹಕ್ಕೆ ಪ್ರತ್ಯೇಕ ಕೇಂದ್ರ ಪ್ರಾರಂಭಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಹೆಚ್ಚಿನ ಸಂಖ್ಯೆಯ ಪೊಲೀಸರು ಗಂಟಲ ದ್ರವ ನೀಡಲು ಬಂದಿರುವುದು ನನ್ನ ಗಮನಕ್ಕೂ ಬಂದಿತ್ತು. ಮೊದಲೇ ಬಂದ ವೃದ್ಧರು, ಗರ್ಭಿಣಿಯರನ್ನು ಪಕ್ಕಕ್ಕೆ ಸರಿಸಿ ನಿಮಗೆ ಆದ್ಯತೆ ನೀಡುವುದು ಕಷ್ಟವಾಗುತ್ತದೆ. ಆಯುಕ್ತರಿಂದ ಪತ್ರ ತಂದರೆ ಪ್ರತ್ಯೇಕ ಸಮಯ ನಿಗದಿ ಮಾಡಿಕೊಡಬಹುದು ಎಂದು ಪೊಲೀಸರಿಗೆ ತಿಳಿಸಿದ್ದೇನೆ. ಸಂಗ್ರಹಿಸಿದ ಗಂಟಲ ದ್ರವ ಮಾದರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಪ್ಯಾಕ್ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಒಂದಿಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ, ಮಧ್ಯಾಹ್ನ 1 ಗಂಟೆವರೆಗೆ ಗಂಟಲ ದ್ರವ ಸಂಗ್ರಹಿಸಲಾಗುತ್ತದೆ. ಹೆಚ್ಚು ಜನ ಕಾಯುತ್ತಿದ್ದರೆ 2 ಗಂಟೆಯವರೆಗೆ ಸಂಗ್ರಹ ಮುಂದುವರಿಸುತ್ತೇವೆ.| ಡಾ. ಶ್ರೀಧರ ದಂಡೆಪ್ಪನವರಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ