ಜಿಲ್ಲೆ

ತಪಾಸಣೆ ಮಾಡಿಸಿಕೊಳ್ಳದೆ ಸುಮ್ಮನಿರುವುದು ಸರಿಯಲ್ಲ

ಚಿಕ್ಕಬಳ್ಳಾಪುರ : ಕರೊನಾ ಲಕ್ಷಣಗಳು ಕಂಡು ಬಂದರೂ ತಪಾಸಣೆ ಮಾಡಿಸಿಕೊಳ್ಳದೇ ಮಾತ್ರೆಗಳನ್ನು ಸೇವಿಸಿ ಸುಮ್ಮನಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಕರೊನಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಸ್ಥಳೀಯಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಅಧಿಕಾರಿಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಅನೇಕರು ಸೋಂಕಿನ ಲಕ್ಷಣಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುತ್ತಿಲ್ಲ. ಯಾವುದೋ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ. ಬಳಿಕ ಆರೋಗ್ಯದ ಸ್ಥಿತಿ ಹದಗೆಟ್ಟಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಇದೇ ಸಾವು ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತಿದೆ ಎಂದರು.

ಟಾಸ್ಕ್ ಫೋರ್ಸ್ ಸಮಿತಿ ಜನರ ನಿರ್ಲಕ್ಷ್ಯದ ಪ್ರಕರಣಗಳ ಮೇಲೆ ನಿಗಾ ವಹಿಸಬೇಕು. ಆಯಾ ಗ್ರಾಮಗಳಲ್ಲಿ ಜನರ ಪ್ರತಿದಿನದ ಆರೋಗ್ಯದ ಮಾಹಿತಿ ಸಂಗ್ರಹಿಸಬೇಕು, ಈ ನಿಟ್ಟಿನಲ್ಲಿ ಜನರೂ ಸಹ ಅಗತ್ಯ ಸಹಕಾರ ನೀಡಬೇಕು. ಆಗ ಮಾತ್ರ ಸೋಂಕು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿಯೊಬ್ಬರು ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರ ಆರೋಗ್ಯದ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ಯಾರಲ್ಲಾದರೂ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳಿದ್ದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ತಕ್ಷಣವೇ ತಿಳಿಸಬೇಕೆಂದು ಸೂಚಿಸಿದರು.

ಟಾಸ್ಕ್ ಫೋರ್ಸ್ ಕಮಿಟಿ ಅಧಿಕಾರಿಗಳಿಗೆ ಉಪನ್ಯಾಸಕ ಸಿ.ಎನ್.ಶಂಕರರೆಡ್ಡಿ ಕರೊನಾ ನಿಯಂತ್ರಣದ ಬಗ್ಗೆ ತರಬೇತಿ ನೀಡಿದರು. ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ ಮಿಥುನ್‌ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಕರೊನಾ ನೋಡೆಲ್ ಅಧಿಕಾರಿ ಡಾ. ಎನ್.ಭಾಸ್ಕರ್ ಇತರರಿದ್ದರು.

ಆತ್ಮಸ್ಥೈರ್ಯ ತುಂಬಿ: ಟಾಸ್ಕ್‌ಫೋರ್ಸ್ ಕಮಿಟಿ ಆಯಾ ವ್ಯಾಪ್ತಿ ಪ್ರದೇಶದಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಳ್ಳಬೇಕು. ಸೋಂಕು ನಿಯಂತ್ರಣದ ಹೊಸ ಹೊಸ ಮಾಹಿತಿಗಳನ್ನು ನೀಡಲಾಗುತ್ತದೆ, ಕ್ವಾರಂಟೈನ್ ಮತ್ತು ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸ್ವಯಂ ಸೇವಕರ ಮೂಲಕ ಸೋಂಕಿತರ ಮತ್ತು ಶಂಕಿತರ ಮನೆಗಳಿಗೆ ಆಹಾರ ಸಾಮಗ್ರಿ ತಲುಪಿಸಬೇಕು. ಸೋಂಕಿತರಿಗೆ ಆತ್ಮಸ್ಥೆರ್ಯ ತುಂಬುವಂತೆ ಡಿಸಿ ಸಲಹೆ ನೀಡಿದರು.