ಜಿಲ್ಲೆ

ತಪಾಸಣಾ ಶಿಬಿರಕ್ಕೆ ಸಿದ್ಧತೆ ಕೈಗೊಳ್ಳಿ

ಚಾಮರಾಜನಗರ: ಭಾರತ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಅಲಿಮ್ಕೊ ಸಂಸ್ಥೆಯ ನೇತೃತ್ವದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆ ಒದಗಿಸುವ ಉದ್ದೇಶದಿಂದ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಂಗವಿಕಲರಿಗೆ ಸಾಧನ ಸಲಕರಣೆ ಸೌಲಭ್ಯ ವಿತರಿಸುವ ತಪಾಸಣಾ ಶಿಬಿರ ಏರ್ಪಡಿಸುವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಂಗವಿಕಲರ ತಪಾಸಣೆ ನಡೆಸಿ ಅಗತ್ಯವಿರುವ ಉಪಕರಣಗಳನ್ನು ನೀಡುವ ಸಂಬಂಧ ಜಿಲ್ಲೆ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಶಿಬಿರಗಳನ್ನು ಏರ್ಪಡಿಸಬೇಕಿದೆ. ಶಿಬಿರದಲ್ಲಿ ವೈದ್ಯ ತಜ್ಞರು, ತಾಂತ್ರಿಕ ಸಿಬ್ಬಂದಿ ಭಾಗವಹಿಸಲಿದ್ದಾರೆ. ಇವರಿಗೆ ನೆರವಾಗಲು ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯ ಕಾರ್ಯಕರ್ತರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಯೋಜಿಸಬೇಕೆಂದು ತಿಳಿಸಿದರು.

ತಪಾಸಣಾ ಶಿಬಿರ ನಡೆಸಿಕೊಡಲು ಆಗಮಿಸಲಿರುವ ತಜ್ಞರು, ತಾಂತ್ರಿಕ ಸಿಬ್ಬಂದಿಗೆ ಅಗತ್ಯವಿರುವ ಪೀಠೋಪಕರಣ, ಕೊಠಡಿಗಳು, ತಪಾಸಣೆಗಾಗಿ ಈ ಹಿಂದೆ ನಿಗದಿಪಡಿಸಲಾಗಿದ್ದ ವಿಶಾಲ ಸ್ಥಳಗಳಲ್ಲಿ ಅವಶ್ಯಕ ಸೌಕರ್ಯಗಳನ್ನು ಒದಗಿಸಬೇಕು. ಶಿಬಿರದ ಸ್ಥಳಕ್ಕೆ ಬರಲು ಹಾಗೂ ತಪಾಸಣೆಯ ನಂತರ ಮರಳಿ ಊರಿಗೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದರು.

ಶಿಬಿರಕ್ಕೆ ಬರುವ ವಿಶೇಷಚೇತನರಿಗೆ ಉಪಾಹಾರ, ಶುದ್ಧ ಕುಡಿಯುವ ನೀರು ವ್ಯವಸ್ಥೆಯಾಗಬೇಕು. ಶಿಬಿರಗಳಿಗೆ ಅಂಗವಿಕಲರು ತಪ್ಪದೆ ಪಾಲ್ಗೊಳ್ಳಲು ಅನುವಾಗುವಂತೆ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಭೆಯನ್ನು ಮುಂಚಿತವಾಗಿ ಕರೆದು ಫಲಾನುಭವಿಗಳ ಪಟ್ಟಿ ತಯಾರಿಸಬೇಕು. ಅಂಗವಿಕಲರು, ಹಿರಿಯ ನಾಗರಿಕರ ನೋಂದಣಿ ಕಾರ್ಯ ಕೈಗೊಂಡು ಸಂಬಂಧಪಟ್ಟವರಿಗೆ ಸೂಕ್ತ ಜವಾಬ್ದಾರಿ ನಿರ್ವಹಿಸಲು ತಿಳಿಸಬೇಕು ಎಂದು ನಿರ್ದೇಶನ ನೀಡಿದರು.

ಅಂಗವಿಕಲರು ಮಾತ್ರವಲ್ಲದೇ 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಶ್ರವಣ ಸಾಧನ, ನಡಿಗೆ ಕೋಲು ಇತ್ಯಾದಿ ಸೌಲಭ್ಯಗಳಿಗೆ ಅವಕಾಶವಿದೆ. ಶ್ರವಣ, ಕಣ್ಣು, ದಂತ ಇನ್ನಿತರ ತೊಂದರೆಗಳಿರುವ ಹಿರಿಯ ನಾಗರಿಕರು ಕೂಡ ಶಿಬಿರದ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಬೇಕು. ಶಿಬಿರದ ಸಂದರ್ಭದಲ್ಲಿ ಯುಡಿಐಡಿ ಕಾರ್ಡ್ ವಿತರಣೆ, ಪಿಂಚಣಿ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಏರ್ಪಾಡು ಮಾಡಬೇಕು ಎಂದು ತಿಳಿಸಿದರು.

ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೀನಾಕ್ಷಿ, ಅಲಿಮ್ಕೊ ಸಂಸ್ಥೆಯ ಶಿಲ್ಪಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ ಇತರರು ಹಾಜರಿದ್ದರು.