ಜಿಲ್ಲೆ

ತಪಸಾರೆಯಲ್ಲಿ ಮಹದೇಶ್ವರ ಸ್ವಾಮಿಗೆ ಪೂಜೆ

 ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಶ್ರೀ ಮಹದೇಶ್ವರರು ತಪಸ್ಸು ಮಾಡಿದ ತಪಸಾರೆಯಲ್ಲಿ ನಿರ್ಮಿಸಿರುವ ಶ್ರೀ ಮಹದೇಶ್ವರ ಸ್ವಾಮಿ ದೇಗುಲದಲ್ಲಿ ಸೋಮವಾರ ರಾತ್ರಿ ಧನುರ್ಮಾಸ ಹಿನ್ನೆಲೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಶ್ರೀ ಮಲೆಮಹದೇಶ್ವರರು ಶ್ರವಣನ ಸಂಹಾರಕ್ಕೂ ಮುನ್ನಾ ಅರಣ್ಯ ಪ್ರದೇಶದಿಂದ ಕೂಡಿರುವ ಈ ತಪಸಾರೆಯಲ್ಲಿ ತಪಸ್ಸು ಮಾಡಿದ್ದರು. ಇದರ ನೆನಪಾರ್ಥವಾಗಿ ಭಕ್ತರು ದೇಗುಲ ನಿರ್ಮಿಸಿದ್ದು ಪ್ರತಿ ವರ್ಷ ಧನುರ್ಮಾಸ ಆರಂಭದ ರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ದೇಗುಲವನ್ನು ತಳಿರು ತೋರಣ, ಹೂಗಳು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 9ಗಂಟೆಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ನೈವೇದ್ಯ ಅರ್ಪಿಸಲಾಯಿತು. ದೀಪ ಧೂಪದಾರತಿ, ಮಹಾ ಮಂಗಳಾರತಿ ಬೆಳಗಿಸಲಾಯಿತು. ಭಕ್ತರು ಪೂಜೆ ಸಲ್ಲಿಸಿದರು. ರಾತ್ರಿ ಮಾದಪ್ಪನ ದೇವರ ಗುಡ್ಡರಿಂದ ಕೀರ್ತನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಕ್ತರಿಗೆ ರಾಗಿ ಮುದ್ದೆ, ಹಲಸಿನಕಾಯಿ, ಅವರೆಕಾಳು ಸಾಂಬಾರು, ಪಾಯಸ, ಒಬ್ಬಟ್ಟು, ತುಪ್ಪದ ಕಜ್ಜಾಯ, ಕುಂಬಳಕಾಯಿ ಪಲ್ಯ ಹಾಗೂ ಅನ್ನ, ತರಕಾರಿ ಸಾಂಬರ್ ಊಟದ ವ್ಯವಸ್ಥೆ ಮಾಡಲಾಗಿತ್ತು.