ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಳಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಅವ್ಯವಹಾರ ನಡೆದಿದೆ ಎಂದು ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಜನರೆದುರು ವಾಸ್ತವಾಂಶ ತೆರೆದಿಡುವಂತೆ ಕೋರಿ ಆಶ್ರಮದ ವಿಶ್ವಸ್ತ ಸಮಿತಿ ಜಿಲ್ಲಾಧಿಕಾರಿಗೆ ಸ್ವಯಂ ಮನವಿ ಮಾಡಿದೆ.
ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು, ತನಿಖೆಗೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಉಪಾಧ್ಯಕ್ಷ ರಾಘವೇಂದ್ರ ಪಾಟೀಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರ್‌ದಾಸ್ ಸ್ವಾಮೀಜಿ ಅವರಿಂದ 1943ರಲ್ಲಿ ಸ್ಥಾಪನೆಯಾಗಿ, 1965ರಲ್ಲಿ ನೋಂದಣಿಯಾಗಿರುವ ಈ ಸಮಿತಿ ಅಂದಿನಿಂದ ಈವರೆಗೂ ಸರ್ವರಿಗೂ ಸೇವೆ ಸಲ್ಲಿಸುತ್ತಾ ಬಂದಿದೆ. 2023ರಲ್ಲಿ ಟ್ರಸ್ಟ್‌ಗೆ ಹೊಸ ಸಮಿತಿ ನೇಮಕವಾಗಿದೆ.
ಟ್ರಸ್ಟ್ ಸದಸ್ಯ ರವಿ ಮಲ್ಲಾಪುರ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಟ್ರಸ್ಟಿಯನ್ನಾಗಿ ಆಹ್ವಾನಿಸಿ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದರು.
ಸಹಿ ಪೋರ್ಜರಿ
ಬಿಪಿಇಡಿ ಕೋರ್ಸ್ ಓದಿ, ಆದರೆ, ಶುಲ್ಕ ಕಟ್ಟದ ಹಾಗೂ ಆಶ್ರಮ ಜಮೀನಿನ ಖೇಣಿ ಪಾವತಿಸದೆ ಡಿಪಾಲ್ಟರ್ ಆಗಿರುವ ಬಿ.ಎಂ. ಸಂತೋಷ್ ಎಂಬುವವರು ಟ್ರಸ್ಟ್ ಸದಸ್ಯತ್ವ ಸಿಗಲಿಲ್ಲವೆಂಬ ಕಾರಣಕ್ಕೆ ಗೊಂದಲ ಸೃಷ್ಟಿಸುತ್ತಿದ್ದಾರೆ. ನನ್ನ ಸಹಿ ಪೋರ್ಜರಿ ಮಾಡಿ, ನಕಲಿ ಪತ್ರಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿರುವ ಇವರ ವಿರುದ್ಧ ಹೊಳಲ್ಕೆರೆ ಠಾಣೆಗೆ ದೂರು ನೀಡಲಾಗಿದೆ ಎಂದು ರಾಘವೇಂದ್ರ ಪಾಟೀಲ್ ತಿಳಿಸಿದರು.
ಪಟ್ಟಭದ್ರರ ಕುಮ್ಮಕ್ಕು
ಆರೋಪಗಳ ಹಿಂದೆ ಪಟ್ಟಭದ್ರರ ಕುಮ್ಮಕ್ಕಿದ್ದು,ಇದಕ್ಕಾಗಿ ಲಕ್ಷಾಂತರ ರೂ. ಸಂದಾಯವಾಗಿದೆ ಎಂದು ಆರೋಪಿಸಿದ ಪಾಟೀಲ್, ಹಣದೊಂದಿಗೆ ಇರುವ ವ್ಯಕ್ತಿಯೊಬ್ಬರ ಪೋಟೊ ಪ್ರದರ್ಶಿಸಿದರು.
ಆಶ್ರಮದ ಪಿಆರ್‌ಒ ಮಾಡಬೇಕೆಂಬ ಮತ್ತೊಬ್ಬರ ಬೇಡಿಕೆ ತಿರಸ್ಕರಿಸಲಾಗಿದೆ. ಅದಕ್ಷತೆ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿರುವುದು ಆರೋಪಗಳಿಗೆ ಕಾರಣವಾಗಿದೆ ಎಂದರು.
ಸಮಜಾಯಿಷಿ ನೀಡಿದರೂ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತ, ಟ್ರಸ್ಟಿಗಳ ವೈಯಕ್ತಿಕ ತೇಜೋವಧೆ ಮಾಡುತ್ತ ಆಶ್ರಮದ ಘನತೆಗೆ ಕುಂದುಂಟು ಮಾಡುತ್ತಿರುವುದರ ಕುರಿತು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಲಾಗಿದೆ.
ಸೈಬರ್‌ಠಾಣೆಗೂ ದೂರು ನೀಡಲಾಗುವುದು.ಕಾನೂನು ಕ್ರಮ ಜರುಗಿಸಲಾಗುವುದು ಎಂದ ಅವರು 2023ರಿಂದ ಸಮಿತಿ ಶಾಲಾ-ಕಾಲೇಜು ಗಳನ್ನು ಅಭಿವೃದ್ಧಿಪಡಿಸಿರುವ ಕುರಿತು ವಿವರಿಸಿದರು.
ಮಾಜಿ ಶಾಸಕ, ಟ್ರಸ್ಟ್ ಕಾರ್ಯದರ್ಶಿಎಸ್.ಕೆ. ಬಸವರಾಜನ್, ಉಪಾಧ್ಯಕ್ಷ ಪ್ರಕಾಶ್, ಖಜಾಂಜಿ ಪ್ರೊ.ಜಿ.ಎನ್. ಮಲ್ಲಿಕಾರ್ಜುನಪ್ಪ, ಆಡಳಿತಾಧಿಕಾರಿ ಡಾ. ಪಾಂಡುರಂಗಮೂರ್ತಿ, ಟ್ರಸ್ಟಿಗಳಾದ ರವಿ, ಎಂ.ಜಿ. ರಾಮದಾಸ್, ಡಾ. ಶ್ರೀಕಂಠಮೂರ್ತಿ, ಸೊಂಡೇಕೊಳ ಶ್ರೀನಿವಾಸ್, ಕೆಂಗುಂಟೆ ಜಯಣ್ಣ, ಶಿವರಾಮಯ್ಯ ಇದ್ದರು.
ತನಿಖೆ ನಡೆಸಿ ವಾಸ್ತವಾಂಶ ಮುಂದಿಡಲು
ಅನಾಥಾಶ್ರಮದಲ್ಲಿ ಅವ್ಯವಹಾರಗಳಾಗಿವೆ ಎಂಬ ಆರೋಪಗಳ ಕುರಿತಂತೆ ತನಿಖೆ ನಡೆಸಲು ಕೋರಿ ಟ್ರಸ್ಟ್ ನೂತನ ಅಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಆಶ್ರಮದ ಹಣಕಾಸಿನ ವ್ಯವಹಾರಗಳನ್ನು ಪರಿಶೀಲಿಸಿ ವಾಸ್ತವಾಂಶ ಜನರ ಮುಂದಿಡಬೇಕು. ಲೆಕ್ಕಪತ್ರ ಪರಿಶೀಲನೆಗೆ ಪೂರಕ ದಾಖಲೆಗಳೊಂದಿಗೆ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು.
ಆಶ್ರಮದ ಆವರಣದಲ್ಲಿ ಶಾಲಾ, ಕಾಲೇಜುಗಳು, ವಿದ್ಯಾರ್ಥಿನಿಲಯಗಳು, ಆಯುರ್ವೇದ ಆಸ್ಪತ್ರೆ, ನೌಕರರ ವಸತಿ ಗೃಹಗಳು, ನೂರಾರು ರಾಜ್ಯ, ಹೊರ ರಾಜ್ಯದ ವಿದ್ಯಾರ್ಥಿಗಳಿದ್ದು, ಅಹಿತಕರ ಘಟನೆಗಳಾಗದಂತೆ ರಕ್ಷಣೆ ಒದಗಿಸಬೇಕು. ಪೂಜ್ಯರಿಂದ ಸ್ಥಾಪಿತ ಈ ಸಂಸ್ಥೆಯ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿದೆ. ಪ್ರತಿ ವರ್ಷವೂ ಆಡಿಟ್ ಮಾಡಿಸಿ ಸಲ್ಲಿಸಲಾಗುತ್ತಿದೆ ಎಂದು ಶ್ರೀಗಳು ಡಿಸಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.